ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಟಿ.ಜಿ. ಸುರೇಶಾಚಾರ್, ಡಾ.ಕೆ.ರಂಗಸ್ವಾಮಿ, ಎಂ.ರಾಜಣ್ಣ, ಮಹೇಶ್ ದಳಪತಿ, ಕೆ.ಎನ್.ಪ್ರಭುಸ್ವಾಮಿ, ಕೆ.ಡಿ.ವಿನೂತನ್ ಇತರರು ಇದ್ದರು.
- ಸಾಹಿತಿ ಮಹೇಶ್ ದಳಪತಿ ಬಣ್ಣನೆ
- ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ
ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಾ ಬೆಳಕು ಎಂದು ಸಾಹಿತಿ ಹಾಗೂ ಉಪನ್ಯಾಸಕ ಮಹೇಶ್ ದಳಪತಿ ಬಣ್ಣಿಸಿದರು.
ಪಟ್ಟಣದ ತಾಲೂಕು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ವಿಶ್ವದ ಮೊದಲ ಮಹಾ ಬೆಳಕು ಬುದ್ಧನಾದರೆ, ದೇಶದ ಮಹಾ ಬೆಳಕಾದ ಅಂಬೇಡ್ಕರ್ ಅವರಂತೆ ನಾಡಿನಲ್ಲಿ ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಬೆಳಕಾಗಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಾದ ಸಮಾನತೆ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಆಡಳಿತದ ಮೂಲಕ ಸಾಕಾರಗೊಳಿಸಿದ ಮಹಾನ್ ಮುತ್ಸದ್ದಿ ಅರಸು ಎಂದರು.
ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿ, ಹಾವನೂರು ಆಯೋಗದ ಮೂಲಕ ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮಕ್ಕೆ ನಾಂದಿ ಹಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಭೂಸುಧಾರಣೆ, ಭಾಗ್ಯಜ್ಯೋತಿ, ಜನತಾ ಮನೆ ಹಾಗೂ ವೃದ್ಧಾಪ್ಯ ಪಿಂಚಣಿ ಯೋಜನೆಗಳು ಅವರ ದೂರದೃಷ್ಟಿಯ ಆಡಳಿತಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದವರನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಸ್ಮರಣೀಯ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಈ ಕಾರಣಕ್ಕಾಗಿಯೇ ಅವರನ್ನು ಸಾಮಾಜಿಕ ಸುಧಾರಕ ಹಾಗೂ ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಕರೆಯಲಾಗುತ್ತದೆ ಎಂದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆ, ಪ್ರಬಂಧ, ಚೆಸ್, ಕೇರಂ, 100 ಮೀಟರ್ ಓಟ, ಮ್ಯೂಸಿಕಲ್ ಚೇರ್ ಹಾಗೂ ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ನೀಡಲಾಯಿತು.
ಪ್ರಭಾರ ಇಒ ಡಾ.ಕೆ.ರಂಗಸ್ವಾಮಿ, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಕೆ.ಸತೀಶ್, ತಲಕಾಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶೀಲಾ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ರೈತ ಮುಖಂಡ ಬನ್ನೂರು ನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಬಿಸಿಯೂಟ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ.ಕೆಂಪರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.