ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಾಬೂಜಿ ಜಯಂತಿ ಸಮಾರಂಭವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ನಿಂಗರಾಜ ಮಲ್ಲಾಡಿ, ನೇರಳಕುಪ್ಪೆ ಮಹದೇವ್, ಶಿವಣ್ಣ, ಡಿ.ಕುಮಾರ್,ಅಣ್ಣಯ್ಯನಾಯ್ಕ, ಪುಟ್ಟರಾಜು ಇತರರಿದ್ದರು.
ಹುಣಸೂರು : ಬಾಬು ಜಗಜೀವನ್ ರಾಮ್ ಕಲ್ಯಾಣ ಭಾರತದ ಜೀವಂತಿಕೆಯ ಮಹಾನ್ ನಾಯಕ ಎಂದು ಸಾಹಿತಿ ಜೆ.ಮಹದೇವ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಅಸ್ಪ್ರಶ್ಯತೆ ಮತ್ತು ಅಸಮಾನತೆ ವಿರುದ್ಧ ಜೀವಮಾನದುದ್ದಕ್ಕೂ ಹೋರಾಡಿದ ಅಪ್ರತಿಮ ನಾಯಕ ಬಾಬೂಜಿ. 3 ಬಾರಿ ಪ್ರಧಾನಿಯಾಗುವ ಮತ್ತು ಒಮ್ಮೆ ರಾಷ್ಟ್ರಪತಿಯಾಗುವ ಅವಕಾಶವನ್ನು ಕಳೆದುಕೊಂಡ ದುರಂತ ನಾಯಕ. ಆದರೆ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಸತತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿ ನೇತಾರರಾಗಿ ಗುರುತಿಸಿಕೊಂಡಿದ್ದಾರೆ. ಅಪ್ರತಿಮ ರಾಷ್ಟ್ರಭಕ್ತರಾಗಿ, ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಏಳಿಗೆ, ಸಾರಿಗೆ, ಸಂಪರ್ಕ, ವಿಮಾನಯಾನ ಇಲಾಖೆ ಮಾತ್ರವಲ್ಲದೇ ಕೃಷಿ ಸಚಿವರಾಗಿ ಹಸಿವು ಮುಕ್ತ ಭಾರತ ನಿರ್ಮಾಣದ ಪ್ರಮುಖ ಕರ್ತೃವಾಗಿ ಇಂದಿಗೂ ಗುರುತಿಸಲ್ಪಡುತ್ತಾರೆ. ಸಮಸ್ಯೆಗಳು ಎದುರಾದಾಗ ಟ್ರಬಲ್ ಶೂಟರ್ ಆಗಿ ಸಮಸ್ಯೆಗಳ ಪರಿಹಾರಕ್ಕೆ ಸೂತ್ರಗಳನ್ನು ನೀಡುತ್ತಿದ್ದರು. ಅವರ ರಾಜಕೀಯ ಜೀವನ ಭಾರತದ ಅಭಿವೃದ್ಧಿ, ಸಮಾನತೆ ಮತ್ತು ದಾರಿದ್ರ್ಯ ನಾಶದ ಗುರಿಯನ್ನು ಹೊಂದುವ ಮೂಲಕ ಕಲ್ಯಾಣ ಭಾರತದ ಕನಸನ್ನು ಕಂಡು ಅದಕ್ಕಾಗಿ ದುಡಿದ ಮೇರುನಾಯಕ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಬಾಬೂಜಿ ಮತ್ತು ಅಂಬೇಡ್ಕರ್ ಅಸ್ಪ್ರಶ್ಯತೆ ವಿರುದ್ಧ ಸಮಾನತೆಯ ಹೋರಾಡಿದರೂ ಅವರಿಬ್ಬರ ಹೋರಾಟದ ದಾರಿ ವಿಭಿನ್ನವಾಗಿತ್ತು. 21ನೇ ಶತಮಾನದಲ್ಲಿ ನಾವಿದ್ದರೂ ಇಂದಿಗೂ ಅಲ್ಲಲ್ಲಿ ಅಸ್ಪಶ್ಯತೆಯ ಸೋಂಕು ಕಾಣುತ್ತಲೇ ಇದೆ. ಅಂದರೆ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವ ನೆಪಮಾತ್ರದ ಕಾರ್ಯ ಮಾಡುತ್ತಿದ್ದೇವೆ. ಇದು ನಿಲ್ಲಬೇಕು. ಜಯಂತಿಗಳು ಮಹನೀಯರ ಜೀವನಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಣೆ ನೀಡಬೇಕಿದೆ ಎಂದರು.
ಆದಿಜಾಂಬವ ಸಂಘದ ಮುಖಂಡ ಡಿ.ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಮುಖಂಡರಾದ ಶಿವಣ್ಣ, ಮಾದಿಗ ಹೋರಾಟ ಸಮಿತಿ ಅಧ್ಯಕ್ಷ ಪರಶುರಾಮ್, ಎಸ್ಸಿಎಸ್ಟಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಬೋವಿ ಸಮಾಜದ ರಾಮಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ನಗರಸಭೆ ಮಾಜಿ ಸದಸ್ಯ ಎಚ್.ಪಿ.ಸತೀಶ್‌ಕುಮಾರ್, ಪೌರಾಯುಕ್ತೆ ಎಂ.ಮಾನಸ, ಇಒ ಕೆ.ಹೊಂಗಯ್ಯ, ಬಿಇಒ ಎಸ್.ಪಿ.ಮಹದೇವ್ ಮತ್ತು ಸಮಾಜದ ಬಂಧುಗಳು ಹಾಜರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿಮಂದಿರದಿಂದ ಬಾಬೂಜಿಯವರ ಭಾವಚಿತ್ರವನ್ನೊಳಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎಂಬಂತೆ ಜಯಂತಿಗಳ ಪ್ರಾಮುಖ್ಯತೆ ಮಹಿಳೆಯರಿಗೆ ತಿಳಿದಲ್ಲಿ ಅವರ ಮೂಲಕ ಕುಟುಂಬ ಮತ್ತು ಸಮುದಾಯಕ್ಕೆ ತಿಳಿಯಲು ಸಾಧ್ಯ. ಮುಂದಿನ ದಿನಗಳಲ್ಲಿ ಇಂತಹ ಜಯಂತಿ ಸಮಾರಂಭಗಳಲ್ಲಿ ಮಹಿಳೆಯರಿಗೆ ಮಾತನಾಡಲು ಅವಕಾಶ ನೀಡಬೇಕು. ಈಗಲೂ ಯಾರಾದರೂ ಮಾತನಾಡುವುದಿದ್ದರೆ ಮಾತನಾಡಿ ಎಂದು ಶಾಸಕ ಹರೀಶ್‌ಗೌಡ ಕೋರಿದಾಗ ಸಭಿಕರಲ್ಲಿದ್ದ ಕಟ್ಟೆಮಳಲವಾಡಿ ಗ್ರಾ.ಪಂ. ಸದಸ್ಯೆ ಸೌಮ್ಯಾ ಎಂಬುವರು ಅವಕಾಶ ಸದುಪಯೋಗಪಡಿಸಿಕೊಂಡು ಬಾಬೂಜಿಯವರ ಸಾಧನೆಗಳ ಕುರಿತು ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.