ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಸಿಬಂದಿಯನ್ನು ಸನ್ಮಾನಿಸಲಾಯಿತು. ಡಾ.ಅಭಿಲಾಷ್, ಡಾ.ದಯಾನಂದಬಾಬು, ಕಮಲಮ್ಮ, ನೀಲವೇಣಿ, ಪಲ್ಲವಿ, ರವಿಕುಮಾರ್, ವೆಂಕಟೇಶ್ ಇತರರು ಇದ್ದರು.
ತಿ.ನರಸೀಪುರ: ಸಾಮಾಜಿಕ ಅಸಮಾನತೆ ವಿರೋಧಿಸಿ, ಮಾನವತಾವಾದ ಪ್ರತಿಪಾದಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೈಕ್ಷಣಿಕ ಸಾಧನೆಗೆ ಪ್ರೇರಕ ಶಕ್ತಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ 32 ಪದವಿ ಪಡೆದು ವಿಶ್ವಜ್ಞಾನಿಯಾದರು ಎಂದು ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ಡಾ.ದಯಾನಂದ ಬಾಬು ಬಣ್ಣಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ನಾನು ಇಷ್ಟಪಡುವುದು ಅಂಬೇಡ್ಕರ್ ಅವರನ್ನು. ವಿಶ್ವಜ್ಞಾನಿ ಅಲ್ಲದೆ ಮಾನವತಾವಾದಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪದವಿಗಳನ್ನು ಪಡೆದ ಮಹಾ ಸಾಧಕ ಬಾಬಾ ಸಾಹೇಬರು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಮಾತನಾಡಿ, ಭಾರತೀಯರಾದ ನಾವು ಸಂತೋಷ ಪಡುವ ದಿನವೇ ಅಂಬೇಡ್ಕರ್ ಜಯಂತಿಯಂದು. ನಾವು ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಾಬಾ ಸಾಹೇಬರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಈ ದಿನವನ್ನು ವಿಶ್ವದ ಜ್ಞಾನದ ದಿನವನ್ನಾಗಿ ಘೋಷಿಸಿದೆ. ಬಾಬಾ ಸಾಹೇಬರು ತಮ್ಮ ಜೀವನದ ಉದ್ದಕ್ಕೂ ನೋವನ್ನು ಅನುಭವಿಸಿ ದೇಶ-ವಿದೇಶಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದು ಭಾರತ ದೇಶದಲ್ಲಿ ನಡೆಯುತ್ತಿದ್ದ ಅಸ್ಪಶ್ಯತೆ, ಅಸಮಾನತೆ,ಲಿಂಗ ತಾರತಮ್ಯ ಇವುಗಳ ಬಗ್ಗೆ ಚಿಂತಿಸಿ ಜಗತ್ತಿನ ಎಲ್ಲ ಸಂವಿಧಾನಕ್ಕಿಂತಲೂ ಸರ್ವ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದರು.
ವಿಶೇಷವಾಗಿ ಅಲಂಕರಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿ ಪುಷ್ಪಾರ್ಚನೆ ಮಾಡಿದರು. ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ಅಲ್ಲದೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರಾದ ಕಮಲಮ್ಮ, ನೀಲವೇಣಿ, ಪಲ್ಲವಿ, ರವಿಕುಮಾರ್, ವೆಂಕಟೇಶ್, ಮಾನಸಾ, ತೇಜಾಮಣಿ. ಕಿಶೋರ್, ಸುಮಾ, ಸಮಾಜ ಸೇವಕ ನೀಲಸೋಗೆ ಉಮೇಶ್, ನಾರಾಯಣ ಮೂರ್ತಿ, ಆರ್.ಉಮೇಶ್ ಕುಮಾರ್, ಪ್ರಸನ್ನ, ಚಿದಾನಂದ, ಚಾಲಕ ಮಹೇಂದ್ರ ಕುಮಾರ್, ಮಧು, ಶ್ರೀನಿವಾಸ್, ರಾಜು, ನಿಂಗರಾಜು, ಗ್ರಾ.ಪಂ ಮಾಜಿ ಸದಸ್ಯ ಕೆ.ಮಹೇಶ, ಮೂಗೂರು ಶ್ರೀನಿವಾಸ್, ದುಂಡಪ್ಪ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.