ಸರಗೂರಿನಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆ.ಎನ್.ಸುಬ್ಬಣ್ಣ, ಸಿ.ಕೆ.ಗಿರೀಶ್, ಮಂಜುನಾಥ, ಗುರುಸ್ವಾಮಿ, ವೆಂಕಟಸ್ವಾಮಿ, ಲಕ್ಷಣ್, ವೆಂಕಟೇಶ್ ಇತರರಿದ್ದರು. 
ಮೈಸೂರು

ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ

ಸರಗೂರು:

ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಬಲಪಡಿಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ಸುಬ್ಬಣ್ಣ ತಿಳಿಸಿದರು.

ಪಟ್ಟಣದ ಜೆಎಸ್‌ಎಸ್ ಶಿವರಾತ್ರಿ ಶಿವಾನುಭವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈಗಾಗಲೇ ನಮ್ಮೊಂದಿಗಿದ್ದಾರೆ. ಕಾರ್ಯಕರ್ತರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗಬೇಕಿಲ್ಲ. ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ. ಇದು ಪಕ್ಷದ ಚಿಹ್ನೆ ಹಾಗೂ ಸಿದ್ಧಾಂತದ ಆಧಾರದ ಮೇಲೆ ಕಾರ್ಯಕರ್ತರು ಮತ್ತು ಮತದಾರರು ನೀಡಿರುವ ಬೆಂಬಲವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಬಿ-ಫಾರಂ ದೊರೆಯುವ ಸಾಧ್ಯತೆ ಖಚಿತವಾಗಿದೆ. ಮೈತ್ರಿ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎಂಬ ರಿ ಊಹಾಪೋಹಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು ಎಂದು ತಿಳಿಸಿದರು.
ನೂತನ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ.ಗಿರೀಶ್ ಮಾತನಾಡಿ, ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು ಎಂದರು.
ಪಕ್ಷದ ಸಂಘಟನೆ ಮೂಲಕ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಬೇಕು. ಗ್ರಾಮೀಣ ಮಟ್ಟದಿಂದಲೇ ಪಕ್ಷ ಬಲಪಡಿಸಿ, ಪ್ರತಿಯೊಬ್ಬ ಕಾರ್ಯಕರ್ತರೂ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾವೀರ ಸರ್ಕಲ್ ಬಳಿ ಗಣಪತಿ ದೇವಾಲಯ ಪೂಜೆ ಸಲ್ಲಿಸಿ ಬೈಕ್ ರ‌್ಯಾಲಿ ನಡೆಸಲಾಯಿತು. ಇದೇ ವೇಳೆ ಮಂಡಲ ನೂತನ ಅಧ್ಯಕ್ಷ ಸಿ.ಕೆ.ಗಿರೀಶ್ ಅವರನ್ನುಅಭಿನಂದಿಸಲಾಯಿತು.
ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಎಚ್.ಸಿ.ಲಕ್ಷ್ಮಣ್, ಮಾಜಿ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನಂದರಾಜ್, ಮಾಜಿ ಮಂಡಲ ಅಧ್ಯಕ್ಷ ಗುರುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ನವೀನ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಸೈಯದ್ ಅಕ್ರಂ ಪಾಷಾ, ಮಹಾಸಭಾ ಅಧ್ಯಕ್ಷ ನಟರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಹದೇವ್, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಎಚ್.ಡಿ.ಕೋಟೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟೇಶ್, ಪಪಂ ಉಪಾಧ್ಯಕ್ಷ ಶಿವಕುಮಾರ್, ಪಪಂ ಸದಸ್ಯರಾದ ಉಮಾ ರಾಮಚಂದ್ರ, ದಿವ್ಯಾ, ಮುಖಂಡರಾದ ಯೋಗೀಶ್, ಗುರುಸ್ವಾಮಿ, ಹಂಚೀಪುರ ಗಣಪತಿ, ಚನ್ನಪ್ಪ, ಮಂಜುಳಾ ದೇವಣ್ಣ ಇತರರು ಇದ್ದರು.