ಭೇರ್ಯ ಗ್ರಾಮ ಪಂಚಾಯಿತಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ರೇಖಾ, ಪಿಡಿಒ ಮಮತಾ.ಹರೀಶ್ ಇತರರು. 
ಮೈಸೂರು

ಮಡಿವಾಳ ಸಮಾಜದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಲಿ

ಪ್ರಮುಖ ಮುಖ್ಯಾಂಶಗಳು

  • ಭೇರ್ಯ ಹರೀಶ್ ಮನವಿ
ಸಾಲಿಗ್ರಾಮ : ತಾಲೂಕಿನ ಭೇರ್ಯ ಗ್ರಾಮ ಪಂಚಾಯಿತಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಮಹದೇವ್ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಡಿವಾಳ ಮಾಚಿದೇವರ ತಾಲೂಕು ಸಂಘದ ಮಾಜಿ ಕಾರ್ಯದರ್ಶಿ ಭೇರ್ಯ ಹರೀಶ್ ಮಾತನಾಡಿ, ಮಡಿವಾಳ ಮಾಚಿದೇವರು ವಚನಗಳ ಮೂಲಕ ಶೋಷಣೆ ಮತ್ತು ಜಾತಿ ಪದ್ಧತಿ ವಿರುದ್ಧ ಹೋರಾಡಿದ ಮಹಾನ್ ವಚನಕಾರರು. ಇಂತಹ ಮಹನೀಯರು ಮಡಿವಾಳ ಸಮಾಜದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯ. ಹಾಗಾಗಿ ಅವರ ತತ್ವ-ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರು ನಡೆದಿರುವ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಇಂತಹ ಸಣ್ಣ ಸಮಾಜದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು. ಜತೆಗೆ ಮಡಿವಾಳ ಸಮಾಜ ಮಾಡುತ್ತಿರುವ ಕುಲಕಸುಬಿಗೆ ತಕ್ಕಂತೆ ಆಧುನಿಕ ಕಾಲದ ಯಂತ್ರೋಪಕರಣಗಳನ್ನು ಉಚಿತವಾಗಿ ನೀಡಬೇಕು. ಆಗ ಮಾತ್ರ ಮಡಿವಾಳ ಸಮಾಜದ ವೃತ್ತಿ ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಗುತ್ತದೆ. ಸರ್ಕಾರಗಳಿಗೆ ಮನವಿ ಮಾಡಿದರೂ ಯಾರೂ ನಮ್ಮ ಸಮಾಜದ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜದ ಅಭಿವೃದ್ಧಿಗೆ ಸ್ಪಂದಿಸುತ್ತದೆ ಎಂಬ ಭರವಸೆ ಇದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಸಚಿವರು ಸಮಾಜದ ಬಗ್ಗೆ ಗಮನಹರಿಸಿ ಹೆಚ್ಚಿನ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಬಿ ಪಿ , ಕೃಷ್ಣೇಗೌಡ, ಬಿ.ಕೆ.ಮಂಜಪ್ಪ, ತಾಯಮ್ಮ, ಪುಟ್ಟಮಾದಯ್ಯ, ಜಯಲಕ್ಷ್ಮಮ್ಮ, ಕೃಷ್ಣೇಗೌಡ, ರೂಪಾ ಹರೀಶ್, ಮುಖಂಡರಾದ ರಾಜಯ್ಯ ಹರೀಶ್, ಸುಕುಮಾರ್, ಮಂಜುನಾಥಶೆಟ್ಟಿ, ಪಿಡಿಒ ಮಮತಾ, ಸಹಾಯಕಿ ಅಶ್ವಿನಿ, ಸಿಬ್ಬಂದಿ ಜಯಂತ್, ಕುಮಾರ್ ಯೋಗೇಶ್ ಇದ್ದರು.