ನಂಜನಗೂಡು: ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಅಪ್ಪಟ ದೇಸಿ ಆಟಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದ್ದು, ಇದಕ್ಕೆ ಪೂರಕವೆಂಬಂತೆ ಸುತ್ತೂರು ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇಸಿ ಆಟಗಳ ಪ್ರದರ್ಶನ ಏರ್ಪಡಿಸಲಾಗಿದೆ. \
17 ರಿಂದ 19 ರ ವರೆಗೆ ಜೆಎಸ್‌ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ 82 ಶಾಲಾ ಕಾಲೇಜುಗಳಿಂದ 1962 ಬಾಲಕ, ಬಾಲಕಿಯರು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗಾಗಿ ಬುಗುರಿ, ಚೌಕಬಾರ, ಹಗ್ಗ-ಜಗ್ಗಾಟ, ಕೆಸರುಗದ್ದೆ ಓಟ, ಕುಂಟೆಬಿಲ್ಲೆ, ಹಾವು-ಏಣಿ, ಅಳಿಗುಳಿ ಮಣೆ, ಹುಲಿ-ಕುರಿ, ಪಂಚೀ, ಚದುರಂಗ, ಸಿಂಗಂ ಸೇರಿದಂತೆ ಇನ್ನು ಹತ್ತಾರು ಆಟಗಳು ಹಾಗೂ ಗ್ರಾಮೀಣ ಜನತೆಗಾಗಿ ಕೆಸರು ಗದ್ದೆ ಓಟ, 50 ಕೆಜಿ ತೂಕದ ಚೀಲ ಹೊತ್ತುಕೊಂಡು ಓಡುವುದು, ಕಲ್ಲುಗುಂಡು ಎತ್ತುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಹೊಡೆಯುವುದು, ಬುಗುರಿ ಸೇರಿದಂತೆ ಇನ್ನು ಅನೇಕ ಪ್ರತ್ಯೇಕ ಆಟಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ.
ಆಟಗಳಲ್ಲಿ ಭಾಗವಹಿಸಲು ದೇಶದ ನಾನಾ ಮೂಲೆಗಳಿಂದ ಗ್ರಾಮೀಣ ಭಾಗದ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ, ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಈ ಆಟಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಗುತ್ತದೆ.