ಬೆಟ್ಟದಪುರ ಸಮೀಪದ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತ್ತು. 
ಮೈಸೂರು

ವಿಜೃಂಭಣೆಯ ಶ್ರೀ ಆಂಜನೇಯಸ್ವಾಮಿ ರಥೋತ್ಸವ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ರಥೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ ಕಾವೇರಿ ನದಿಯಿಂದ ತೀರ್ಥ ಹಾಗೂ ಮೃತಿಕೆ ಸಂಗ್ರಹಣೆಗಳೊಂದಿಗೆ ಹೊಸದಾಗಿ ನಿರ್ಮಾಣ ಮಾಡಿರುವ ತೇರಿನ ಕಳಸ ಪ್ರತಿಷ್ಠಾಪನೆ ಪೂಜೆ ಸಲ್ಲಿಸಲಾಯಿತು.
ಬಳಿಕ ಸೀತಾರಾಮ ಸಮೇತ ಶ್ರೀ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳನ್ನು ದೇಗುಲ ಸುತ್ತ ಮೆರವಣಿಗೆ ನಡೆಸಿ, ವಿಶೇಷ ಪೂಜೆ ಬಳಿಕ ತೇರಿನ ಮೇಲೆ ಪ್ರತಿಷ್ಠಾಪಿಸಲಾಯಿತು. ಬಳಿಕ ಶುಭಲಗ್ನದಲ್ಲಿ ಭಕ್ತರು ತೇರು ಎಳೆದು ಭಕ್ತಿ ಸಮರ್ಪಣೆ ಮಾಡಿದರು.
ಭಕ್ತರು ಹಣ್ಣು ದವನ ಎಸೆದು, ದೇಗುಲದಲ್ಲಿ ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಯುಗಾದಿ ಕಳೆದ ಎರಡು ದಿನಗಳ ಬಳಿಕ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ರಥೋತ್ಸವ ನಡೆಯುವುದು ಅಂದಿನಿಂದಲೂ ವಾಡಿಕೆಯಲ್ಲಿದೆ. ಆಗಮಿಸಿದ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನದಾನ ಆಯೋಜಿಸಿ, ಪ್ರಸಾದ ವಿತರಣೆ ಮಾಡಲಾಯಿತು.
ಜಾತ್ರೆ ಸಡಗರ: ಪ್ರಾಚೀನ ಕಾಲದಿಂದಲೂ ಸೂಳೆಕೋಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಾಕಷ್ಟು ಮಹತ್ವ ಬಂದಿದೆ. ಪ್ರತಿವಾರ ನಡೆಯುವ ಪೂಜೆಗೆ ಸ್ಥಳೀಯ ಭಕ್ತರು ಮಾತ್ರವಲ್ಲದೆ ನೆರೆಹೊರೆ ಜಿಲ್ಲೆಗಳಿಂದ ಸ್ವಾಮಿಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅದರಂತೆ, ಸ್ವಾಮಿಯ ರಥೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಜಾತ್ರೆಯ ಸಡಗರ ಕಳೆಗಟ್ಟಿತು. ಪ್ರಮುಖ ರಸ್ತೆಗಳು ವೃತ್ತಗಳಲ್ಲಿ ಕೇಸರಿ ಬಾವುಟಗಳು, ತಳಿರು ತೋರಣಗಳು ಕಂಗೊಳಿಸುತ್ತಿದ್ದವು. ದೇವಸ್ಥಾನಕ್ಕೆ ವಿಶೇಷ ಬಣ್ಣಬಣ್ಣದ ದೀಪ ಅಲಂಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿತ್ತು.
ಬಿರುಬಿಸಿನಲ್ಲಿಯೂ ಒಂದು ಕಡೆ ಭಕ್ತರು ಸ್ವಾಮಿಯ ರಥವನ್ನು ಎಳೆದು ಭಕ್ತಿಯನ್ನು ಅರ್ಪಿಸುತ್ತಿದ್ದರೆ, ಇನ್ನೊಂದು ಕಡೆ ಭಕ್ತರು ದೇವರ ಹೆಸರಿನಲ್ಲಿ ಹೊತ್ತುಕೊಂಡಂತಹ ಹರಕೆಗಳನ್ನು ಹಲವು ಬಗೆಯಲ್ಲಿ ತೀರಿಸಿದರು. ಇನ್ನು ಯುವ ಸಮೂಹ ತಮ್ಮ ಮೊಬೈಲಿನಲ್ಲಿ ರಥೋತ್ಸವ, ಜಾತ್ರೆಯ ಸಡಗರಗಳನ್ನು ಚಿತ್ರೀಕರಿಸಿ, ರೀಲ್ಸ್ ಮೂಲಕ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು. ಸಮೀಪದ ಚಾಮರಾಯನ ಕೋಟೆಯ ಉದ್ಭವ ಶ್ರೀ ಹೊಳೆ ಹನುಮಂತರಾಯ ಗುಡಿಯಲ್ಲಿಯೂ ಕೂಡ ಜಾತ್ರೆಯ ಹಿನ್ನೆಲೆ ಭಕ್ತರು ಪೂಜೆ ಸಲ್ಲಿಸಿದರು.
ಧಾರ್ಮಿಕ ಕಾರ್ಯದಲ್ಲಿ ಬೆಟ್ಟದಪುರ ಕನ್ನಡ ಮಠದ ಶ್ರೀ ಚಿಕ್ಕವೀರದೇಶೀಕೇಂದ್ರ ಸ್ವಾಮೀಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಇದ್ದರು.