ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಬುಧವಾರ ಸಕಲ ಗೌರವಗಳೊಂದಿಗೆ ಶ್ರೀ ಕೃಷ್ಣಧಾಮಕ್ಕೆ ಪುರ ಪ್ರವೇಶ ಮಾಡಿದರು. ಟಿ.ಎಸ್.ಶ್ರೀವತ್ಸ, ಬೆ.ನಾ.ವಿಜಯೇಂದ್ರಾಚಾರ್ಯ, ಪ್ರೊ.ಕೆ.ರಾಮಮೂರ್ತಿ, ಟಿ.ಟಿ.ಪ್ರಕಾಶ್, ಎನ್.ಗೋಪಾಲಕೃಷ್ಣ, ರವಿಶಾಸ್ತ್ರಿ. ಟಿ.ಎಸ್.ಶೇಖರ್ ಇತರರು ಇದ್ದರು. 
ಮೈಸೂರು

ಶಿರೂರು ಮಠದ ಭಾವಿ ಪರ್ಯಾಯ ಶ್ರೀಗಳ ಪುರ ಪ್ರವೇಶ

ಪ್ರಮುಖ ಮುಖ್ಯಾಂಶಗಳು

  • ಪರ್ಯಾಯ ಪೂರ್ವ ಪರಿಕ್ರಮ ಯಾತ್ರೆ
ಮೈಸೂರು: ಪರ್ಯಾಯ ಪೂರ್ವ ಪರಿಕ್ರಮ ಯಾತ್ರೆ ಪ್ರಯುಕ್ತ ಮೈಸೂರಿಗೆ ಆಗಮಿಸಿರುವ ಉಡುಪಿಯ ಶ್ರೀ ಶಿರೂರು ಮಠದ ಭಾವಿ ಪರ್ಯಾಯ ಶ್ರೀಗಳಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಬುಧವಾರ ಸಕಲ ಗೌರವಗಳೊಂದಿಗೆ ಶ್ರೀ ಕೃಷ್ಣಧಾಮಕ್ಕೆ ಪುರ ಪ್ರವೇಶ ಮಾಡಿದರು.

ನಗರದ ಸರಸ್ವತಿಪುರಂನ ಜವರೇಗೌಡ ಉದ್ಯಾನದಿಂದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು-ಪುರುಷರು-ಪುಟಾಣಿ ಭಕ್ತಾದಿಗಳು ಭರತನಾಟ್ಯದ ವಸ್ತ್ರಗಳನ್ನು ಧರಿಸಿ ಹೆಜ್ಜೆ ಹಾಕಿ ಶ್ರೀಗಳನ್ನು ರಥದಲ್ಲಿ ಕರೆತಂದರು. ವಾದ್ಯ, ಡೋಲು, ನಗಾರಿ ಶಬ್ದಕ್ಕೆ ಕೆಲವರು ಹೆಜ್ಜೆ ಹಾಕಿದ ಭಕ್ತರು ಶ್ರೀಗಳಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಶ್ರೀ ಕೃಷ್ಣಧಾಮಕ್ಕೆ ಆಗಮಿಸಿದ ಶ್ರೀಗಳು ಪೂಜೆ ಸಲ್ಲಿಸಿ ಅಲ್ಲಿ ಭಕ್ತಾದಿಗಳಿಗೆ ಕೆಲಕಾಲ ಪ್ರವಚನ ನೀಡಿದರು.
ಕೃಷ್ಣಧಾಮದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪ್ರವಚನಾಕಾರ ವಿದ್ವಾನ್ ಬೆ.ನಾ.ವಿಜಯೇಂದ್ರಾಚಾರ್ಯ ಮಾತನಾಡಿ, ವಿಶ್ವೇಶ್ವರ ತೀರ್ಥರು ದೆಹಲಿಯ ರಾಜಕಾರಣಿಗಳಿಗೆ ಮಂತ್ರದ ವಿಚಾರ ಬೊಧಿಸಿದರು. ಸನಾತನ ಧರ್ಮದ ಒಂದುಗೂಡಿಸಿದ ವಿಶ್ವ ಸಂತರು ಅವರು. ಸಮಾಜಕ್ಕೆ ಕಂಟಕವಾದದ್ದನ್ನು ಮೇಲಿಟ್ಟು ಪೂಜಿಸಬಾರದು ಎಂಬುದನ್ನು ನೇರವಾಗಿ ಹೇಳುತ್ತಿದ್ದರು ಎಂದರು.
ದೇವರ ಸಂಬಂಧಕ್ಕೆ ತುಲನೆಯಿಲ್ಲ. ದೇವರ ಸಂಬಂಧ ಇದ್ದಾಗ ಜಗತ್ತಿನ ಭಯ ಇರುವುದಿಲ್ಲ. ಮಾನವರ ಸಂಘ ಹೆದರಿಕೆಯ ವ್ಯವಸ್ಥೆ. ಅನ್ಯರನ್ನು ಭಜಿಸುವುದು ನಿಲ್ಲಿಸಬೇಕು. ನಯವಾದ ಮಾತು, ಇಷ್ಟಾರ್ಥ ಕೊಟ್ಟು ವ್ಯಕ್ತಿಯ ಆರಾಧನೆಗೆ ಮಹತ್ವ ನೀಡುವಷ್ಟು ಶಕ್ತಿ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ವಾದಿರಾಜರು ಹೇಳುತ್ತಾರೆ ಎಂದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ರಾಮಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ, ಸಮಾಜ ಸೇವಕ ಟಿ.ಟಿ.ಪ್ರಕಾಶ್, ಶ್ರೀಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ಎನ್.ಗೋಪಾಲಕೃಷ್ಣ, ಶ್ರೀ ಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಟಿ.ಎಸ್.ಶೇಖರ್ ಇತರರಿದ್ದರು.