ನಗರದಲ್ಲಿ ಆಯೋಜಿಸಿದ್ದ ಯುವ ಇಂಡಿಯನ್ಸ್ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಿದರು. ಪ್ರಿಯಾಂಕಾ ಶ್ರೀಧರ್, ಚರಣ್ ಕಶ್ಯಪ್, ಎನ್.ಸುಕೃತಾ ಇದ್ದರು 
ಮೈಸೂರು

ಯುವ ಸಮೂಹದ ಮೇಲಿದೆ ಭಾರತದ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಲದಂಡಿ ಅಭಿಮತ
  • ಯುವ ಇಂಡಿಯನ್ಸ್ ಪಾರ್ಲಿಮೆಂಟ್ ಕಾರ್ಯಕ್ರಮ
ಮೈಸೂರು: ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಂಸ್ಥೆಯ ಯಂಗ್ ಇಂಡಿಯನ್ಸ್ (ವೈಐ)ವತಿಯಿಂದ ಯುವ ಇಂಡಿಯನ್ಸ್ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ನಗರದಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.
ಸಂಸದೀಯ ಕಲಿಕೆಯ ಅನುಭವದ ಮೂಲಕ ಜವಾಬ್ದಾರಿಯುತ, ಸುಶಿಕ್ಷಿತ ಮತ್ತು ಭವಿಷ್ಯದ ನಾಯಕರನ್ನು ರೂಪಿಸುವ ಉದ್ದೇಶ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ನಗರದ 13 ಪ್ರಮುಖ ಶಾಲೆಗಳ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. 
ಇವರೆಲ್ಲರೂ ಸಂಸದೀಯ ಚರ್ಚೆ, ಸಂವಾದ, ನೀತಿ ನಿರೂಪಣೆ, ಶಾಸನ ರಚನೆಯ ಕಲ್ಪಿತ ಪ್ರಕ್ರಿಯೆಗಳ ಮೂಲಕ ಪ್ರಜಾಪ್ರಭುತ್ವದ ಅನುಭವ ಪಡೆದರು. 
ಭಾರತೀಯ ವಿದ್ಯಾ ಭವನ, ಡಿಎವಿ ಪಬ್ಲಿಕ್ ಸ್ಕೂಲ್, ಎಕ್ಸೆಲ್ ಪಬ್ಲಿಕ್ ಸ್ಕೂಲ್, ಗೀತಾ ಭಾರತಿ ಸ್ಕೂಲ್ ಆಫ್ ಎಕ್ಸಲೆನ್ಸ್, ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್, ಮಹಾಜನ ಪಬ್ಲಿಕ್ ಸ್ಕೂಲ್, ಮಾನಸ ಸರೋವರ ಪುಷ್ಕರಿಣಿ ವಿದ್ಯಾಶ್ರಮ, ಎನ್‌ಪಿಎಸ್ ಇಂಟರ್‌ನ್ಯಾಷನಲ್ ಸ್ಕೂಲ್, ಪ್ರಗತಿ ಎಲೈಟ್ ಪಬ್ಲಿಕ್ ಸ್ಕೂಲ್, ರೋಟರಿ ಸ್ಕೂಲ್ (ನಂಜನಗೂಡು), ಶ್ರೀಶಾರದಾ ಪಬ್ಲಿಕ್ ಸ್ಕೂಲ್, ಸೇಂಟ್ ಜೋಸೆಫ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಆರ್ಕಿಡ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಲದಂಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಲ್ಲೇ ಪ್ರಜಾಪ್ರಭುತ್ವದ ಮೌಲ್ಯ, ಜವಾಬ್ದಾರಿಯುತ ನಾಗರಿಕತ್ವ ಮತ್ತು ನಾಯಕತ್ವದ ಗುಣ ಪರಿಚಯಿಸಬೇಕಿದೆ. ಭಾರತದ ಭವಿಷ್ಯವು ಸುಶಿಕ್ಷಿತ, ನೈತಿಕ ಮತ್ತು ಜವಾಬ್ದಾರಿಯುತ ಯುವಕರ ಮೇಲೆ ಅವಲಂಬಿತವಾಗಿದೆ. 
ವಿದ್ಯಾರ್ಥಿಗಳು ಆಳವಾದ ಆಲೋಚನೆ, ಶಿಸ್ತುಬದ್ಧ ಸಂವಾದ, ವೈವಿಧ್ಯಮಯ ಅಭಿಪ್ರಾಯಗಳಿಗೆ ಗೌರವ ನೀಡುವುದು ಮತ್ತು ಸಕ್ರಿಯ ನಾಗರಿಕ ಪಾಲ್ಗೊಳ್ಳುವಿಕೆಯ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವೈಐ ಮೈಸೂರು ಘಟಕದ ಅಧ್ಯಕ್ಷೆ ಪ್ರಿಯಾಂಕಾ ಶ್ರೀಧರ್ ಮಾತನಾಡಿ, ಯುವ ಇಂಡಿಯನ್ಸ್ ಪಾರ್ಲಿಮೆಂಟ್ ಕೇವಲ ಒಂದು ಸ್ಪರ್ಧೆಯಲ್ಲ, ಬದಲಿಗೆ ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಆತ್ಮವಿಶ್ವಾಸ, ವಿಮರ್ಶಾತ್ಮಕ ಚಿಂತನೆ, ಸಾಂವಿಧಾನಿಕ ಜಾಗೃತಿ, ಸಾರ್ವಜನಿಕ ಭಾಷಣ ಕಲೆ ಪೋಷಿಸುವ ವೇದಿಕೆಯಾಗಿದೆ. 
ಇದು ಯುವ ಮನಸ್ಸುಗಳಿಗೆ ಆಡಳಿತ ಅರ್ಥಮಾಡಿಕೊಳ್ಳಲು, ಪ್ರಜಾಪ್ರಭುತ್ವ ಸಂಸ್ಥೆ ಗೌರವಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗಲು ಪ್ರೇರೇಪಿಸುತ್ತದೆ ಎಂದರು.
ಪ್ರಮುಖ ತೀರ್ಪುಗಾರರಾದ ವಕೀಲ ಲೋಕೇಶ್, ವಕೀಲ ಜಗದೀಶ್, ವಕೀಲ ಸುಶ್ಮಿತಾ ಮತ್ತು ವಕೀಲ ಮೋನಿಶ್ ಅವರು ಮೌಲ್ಯಮಾಪನ ಮಾಡಿದರು. ವಿದ್ಯಾರ್ಥಿಗಳ ಸಂಸದೀಯ ನಡವಳಿಕೆ, ಸಂವಹನ ಕೌಶಲ, ವಿಷಯದ ಆಳ, ನಾಯಕತ್ವದ ಗುಣಗಳು ಮತ್ತು ಒಟ್ಟಾರೆ ಚರ್ಚೆಯ ಪರಿಣಾಮಕಾರಿತ್ವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲಾಯಿತು. ವೈಐ ಸಂಘಟನೆಯ ಚರಣ್ ಕಶ್ಯಪ್, ಎನ್.ಸುಕೃತಾ, ಬಿ.ಜಿ.ಅಮೃತ್ ಉಪಸ್ಥಿತರಿದ್ದರು.