ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಒ.ಎಲ್.ನಾಗಭೂಷಣಸ್ವಾಮಿ, ಪ್ರೊ.ಎಸ್.ಶಿವರಾಜಪ್ಪ, ಡಾ.ಶಾರದಾ, ಡಾ.ಜಿ.ಪ್ರಸಾದಮೂರ್ತಿ, ಡಾ.ಜಿ.ಪ್ರಸಾದಮೂರ್ತಿ ಇದ್ದರು.
ಕವಿ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯಗಳಲ್ಲಿ ವೈಚಾರಿಕತೆ ಮತ್ತು ಮೃದುತ್ವ ಎರಡು ಸಮನಾಗಿ ಸಾಗುತ್ತವೆ ಎಂದು ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಶಿವರುದ್ರಪ್ಪ ಕೇವಲ ಕವಿಯಲ್ಲ, ಅವರು ಸಾಂಸ್ಕೃತಿಕ ಚಿಂತಕರು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಶಕ್ತಿ ಕೇಂದ್ರ ಪ್ರಾರಂಭಿಸಿ ನೂತನ ಪಠ್ಯಕ್ರಮ, ಅಧ್ಯಯನ, ಕಮ್ಮಟವನ್ನೊಳಗೊಂಡಂತೆ ಸಾಹಿತ್ಯ ಚರಿತ್ರೆಯನ್ನು ಮರುಕಟ್ಟುವ ನಿಟ್ಟಿನಲ್ಲಿ ಪಂಪನಿಂದ ಪ್ರಾರಂಭವಾಗಿ ಮಾಸ್ತಿಯವರೆಗೆ ಹಲವಾರು ಅತ್ಯುತ್ತಮ ವಿಚಾರಸಂಕಿರಣಗಳನ್ನು ಏರ್ಪಡಿಸಿದರು. ಗದ್ಯದಲ್ಲಿ ಒಳ್ಳೆಯ ವಿಷಯಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಹೆಚ್ಚೆಚ್ಚು ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತೆರಳಬೇಕಾದರೂ ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಸೌಜನ್ಯಕ್ಕೆ ಹೆಸರಾದವರು ಜಿಎಸ್‌ಎಸ್. ಇವರ ಸಮಗ್ರ ಕಾವ್ಯ 700 ಪುಟಗಳನ್ನು ಹೊಂದಿದ್ದು, 10 ಸಂಪುಟಗಳಲ್ಲಿ ಪ್ರಕಟವಾಗಿದೆ ಎಂದರು.
ಕವಿತೆ ಬರೆಯುವುದು ಜಗತ್ತನ್ನು ತಿದ್ದಲೂ ಅಲ್ಲ, ವ್ಯಕ್ತಿಯ ಮನಸ್ಸಿನೊಳಗಣ ಭಾವನೆಗಳನ್ನು ಮತ್ತು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಲು ಎಂದು ಜಿಎಸ್‌ಎಸ್ ನಂಬಿದ್ದರು. ಅವರು ಯಾವುದೇ ಮಠ, ಮಾನ್ಯಗಳ, ಧಾರ್ಮಿಕ ಸಂಸ್ಥೆಗಳು, ರಾಜಕೀಯ ನಾಯಕರನ್ನು ಹಿಂಬಾಲಿಸದೆ ತಮಗೆ ಸರಿಯೆನಿಸಿದ್ದನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಪದ ಮೂಡಿಸಿದರು ಎಂದರು.
ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿನಿಯರು ಜಿಎಸ್‌ಎಸ್ ಕಾವ್ಯ ವಾಚನ ಮಾಡಿದರು. ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲೆ ಡಾ.ಶಾರದಾ, ಡಾ.ಜಿ.ಪ್ರಸಾದಮೂರ್ತಿ ಇದ್ದರು.