ಭಾರತೀಯ ಭಾಷಾ ಸಂಸ್ಥಾನ  
ಮೈಸೂರು

ಭಾರತೀಯ ಭಾಷಾ ಸಂಸ್ಥಾನದ ಸಾರಥಿಯಾದ ಮೊದಲ ಕನ್ನಡಿಗ!

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪ್ರಾಧ್ಯಾಪಕ ಪ್ರೊ.ಬಸವರಾಜ ಕೊಡಗುಂಟಿ ಸಿಐಐಎಲ್‌ ನಿರ್ದೇಶಕ ಸ್ಥಾನಕ್ಕೆ ನಿಯೋಜನೆ
  • ದೇಶದ ಭಾಷೆಗಳ ಪಾಲಿಗೆ ಪ್ರಯೋಗಶಾಲೆ ಆಗಿರುವ ಸಂಸ್ಥೆ
  • ಈ ಹುದ್ದೆಗೇರಿದ ಮೊದಲ ಕನ್ನಡಿಗ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ದೇಶದ ಭಾಷೆಗಳ ಪಾಲಿಗೆ ಪ್ರಯೋಗಶಾಲೆ ಆಗಿರುವ ಭಾರತೀಯ ಭಾಷಾ ಸಂಸ್ಥಾನಕ್ಕೆ (ಸಿಐಐಎಲ್) ಮೊದಲ ಬಾರಿಗೆ ಕನ್ನಡದ ಪ್ರಾಧ್ಯಾಪಕರೊಬ್ಬರು ನಿರ್ದೇಶಕರಾಗಿದ್ದಾರೆ. ಇದರಿಂದಾಗಿ ಕನ್ನಡ ಭಾಷಾ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತು ಹೊಸ ನಿರೀಕ್ಷೆಗಳು ಮೂಡಿವೆ..!
ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗೂ ಮುಖ್ಯ ಜಾಗ್ರತಾಧಿಕಾರಿ ಪ್ರೊ.ಬಸವರಾಜ ಕೊಡಗುಂಟಿ ಈ ಹುದ್ದೆಗೇರಿರುವ ಮೊದಲ ಕನ್ನಡಿಗರು. ಕನ್ನಡ ಭಾಷಾ ಇತಿಹಾಸ, ವ್ಯಾಕರಣ, ಸಾಹಿತ್ಯ ಚರಿತ್ರೆ, ಭಾಷಾಶಾಸ್ತ್ರದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಕನ್ನಡ ಮತ್ತು ಭಾಷಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಲೇಖನ, ಕೃತಿಗಳನ್ನು ರಚಿಸಿದ್ದಾರೆ.
ಸಿಐಐಎಲ್ ಸ್ಥಾಪನೆಯಾಗಿ 5 ದಶಕ ಗತಿಸಿದರೂ ಈ ಸ್ಥಾನದಲ್ಲಿ ಅನ್ಯಭಾಷಿಗರ ಅಧಿಪತ್ಯವೇ ಅಧಿಕ. ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರು ಈ ಸ್ಥಾನಕ್ಕೆ ನಿಯೋಜನೆಗೊಂಡಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಮೈಸೂರಿನಲ್ಲಿ ಕೇಂದ್ರಸ್ಥಾನವನ್ನು ಹೊಂದಿರುವ ಇದು 1969ರ ಜುಲೈ 17ರಂದು ಸ್ಥಾಪನೆಗೊಂಡಿತು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಒಂದು ಅಂಗಸಂಸ್ಥೆ. ಸಂಸ್ಥೆ ತನ್ನ ಆಶ್ರಯದಲ್ಲಿ ಭಾರತದ ವಿವಿಧ ಪ್ರಮುಖ ಸ್ಥಳಗಳಲ್ಲಿ 7 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ಒಡಿಯಾ ಭಾಷೆಗಳಿಗೆ ಸಂಬಂಧಿಸಿದಂತೆ ಶಾಸ್ತ್ರೀಯ ಅತ್ಯುತ್ತಮ ಅಧ್ಯಯನ ಕೇಂದ್ರಗಳೂ ಇದರ ಅಧೀನದಲ್ಲೇ ಕಾರ್ಯನಿರ್ವಹಣೆ ಮಾಡುತ್ತಿವೆ. 
ಹೀಗೆ ಸಿಐಐಎಲ್ ಭಾರತೀಯ ಭಾಷೆಗಳ ಅಭಿವೃದ್ಧಿ, ಭಾಷಾ ನೀತಿ ಅನುಷ್ಠಾನದ ಪ್ರಮುಖ ಪಾತ್ರ ವಹಿಸುತ್ತದೆ. ಭಾಷಾ ಅಧ್ಯಯನ ಕುರಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಪ್ರತಿಷ್ಠಿತ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇಂತಹವೊಂದು ದೇಶದ ಹಿರಿಮೆಯ ಈ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ನಿರ್ದೇಶಕರಾಗಿ ಇವರಿಗೆ ದೊರೆತಿದೆ. ಹೀಗಾಗಿ, ಕನ್ನಡ ಸೇರಿದಂತೆ ಇತರ ಭಾಷೆಗಳ ಪ್ರಗತಿಗೆ ಹೊಸ ದಿಕ್ಕು ತೋರಿಸಲಿದ್ದಾರೆ ಎಂಬ ನಿರೀಕ್ಷೆಗಳು ಗರಿಗೆದರಿವೆ.

ಕೆಲಸ ಮಾಡಲು ದೊಡ್ಡ ಅವಕಾಶ : ಪ್ರೊ.ಬಸವರಾಜ ಕೊಡಗುಂಟಿ ಹರ್ಷ

ಈ ಸಂದರ್ಭದಲ್ಲಿ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಪ್ರೊ.ಬಸವರಾಜ ಕೊಡಗುಂಟಿ, ‘ಇದು ದೊಡ್ಡ ಜವಾಬ್ದಾರಿ. ಜತೆಗೆ, ಕೆಲಸ ಮಾಡಲು ದೊಡ್ಡ ಅವಕಾಶ ಸಿಕ್ಕಿದೆ. ಸಿಐಐಎಲ್ ಇಡೀ ಭಾರತೀಯ ಭಾಷೆಗಳಿಗೆ ಮಹತ್ವದ ಸಂಸ್ಥೆ. ಭಾಷೆಗಳ ಬೆಳವಣಿಗೆ, ಅಭಿವೃದ್ಧಿ, ಭಾಷಾ ನೀತಿ ರೂಪಿಸುವ ಸಂಸ್ಥೆಯೂ ಹೌದು. ದೊಡ್ಡ ಹೊಣೆಗಾರಿಕೆಯೊಂದಿಗೆ ಮಹತ್ವ ಕೆಲಸ ಮಾಡಲು ಸೌಭಾಗ್ಯ ದೊರೆತಿದೆ’ ಎನ್ನುತ್ತಾರೆ ಅವರು.
‘ಕನ್ನಡ ಮೇಲೆ ಹೆಚ್ಚು ಕೆಲಸ ಮಾಡಿರುವೆ. ಪುಸ್ತಕ, ಲೇಖನ ರಚಿಸಿರುವೆ. ಆದರೆ, ಸಿಐಐಎಲ್ ನಿರ್ದೇಶಕನ ಸ್ಥಾನ ಇಡೀ ದೇಶದ ಭಾಷೆಗಳ ಮೇಲೆ ಕೇಂದ್ರೀಕರಿಸಿದೆ. ಇದರಲ್ಲಿ ಬರುವ ಕನ್ನಡ ಭಾಷೆಯ ಪರವೂ ಕೆಲಸ ಮಾಡುವ ಅಭಿಲಾಷೆ ಸಹ ಇದೆ. ಕನ್ನಡ ಕುರಿತು ಬಹಳಷ್ಟು ಕೆಲಸಗಳು ಆಗಬೇಕಿದೆ. ಕನ್ನಡ ಶಾಸ್ತ್ರೀಯ ಬೆಳವಣಿಗೆಗೆ ಏನು ಕೊಡುಗೆ ನೀಡಬಹುದು, ಜತೆಗೆ, ಕನ್ನಡ ಅಧ್ಯಯನ ಕುರಿತು ಕೆಲ ಯೋಚನೆಗಳಿವೆ. ಅವುಗಳನ್ನು ಸಾಕಾರಕ್ಕೆ ಪ್ರಯತ್ನಿಸುವೆ ಎಂದರು.
‘ಹಳಗನ್ನಡ ಸೇರಿದಂತೆ ಕನ್ನಡ ಭಾಷೆಯ ಕುರಿತು 70-80 ದಶಕದ ಅದೇ ಪಾರಂಪರಿಕ, ಹಳೇ ಮಾದರಿಯ ಅಧ್ಯಯನವೇ ಈಗಲೂ ಮುಂದುವರಿದಿದೆ. ಜಾಗತಿಕ ಮಟ್ಟದಲ್ಲಿ ಹಳೇ ಭಾಷೆಗಳ ಅಧ್ಯಯನ ಹೇಗೆ ನಡೆಯುತ್ತಿದೆಯೋ ಆ ರೀತಿಯಲ್ಲಿ ಸಾಗುತ್ತಿಲ್ಲ. ಅದನ್ನು ನಾವುಗಳೂ ಮಾಡಬೇಕಿದೆ. 
ವಿಜ್ಞಾನ, ತಂತ್ರಜ್ಞಾನ ಬಳಸಿಕೊಂಡು ಆಧುನಿಕ ಅಧ್ಯಯನ ನಮ್ಮಲ್ಲಿ ಬಹಳ ಕಡಿಮೆ. ಎಲ್ಲೆಡೆ ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವನ್ನೂ ಪರಿಣಾಮಕಾರಿ ವಿನಿಯೋಗಿಸಿಕೊಳ್ಳಬೇಕಿದೆ. ಮಿಲಿಯಂ ಶೇಕ್ಸ್‌ಪೀಯರ್ ಸಾಹಿತ್ಯದಂತೆ ಕನ್ನಡದ ರನ್ನ-ಪಂಪನ ಸಾಹಿತ್ಯವು ವಿದೇಶದಲ್ಲಿ ಕುಳಿತವರಿಗೂ ಸುಲಭವಾಗಿ ದೊರೆಯುವಂತೆ ಮಾಡಬೇಕಿದೆ. ದೇಶದ ಪ್ರಮುಖ ಭಾಷೆಗಳ ಸಾಹಿತ್ಯವೂ ಡಿಜಿಟಲ್‌ಮಯವಾಗಬೇಕು. ಆಗಲೇ ಎಲ್ಲರಿಗೂ ಎಲ್ಲ ಕಡೆಗೂ ಸಿಗುವಂತಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಆಲೋಚನೆ ಇದೆ’ ಎಂದು ಹೇಳಿದರು.
‘ತಂತ್ರಜ್ಞಾನ ಬಳಸಿಕೊಂಡು ಭಾಷಾ ಸಾಹಿತ್ಯದ ಡಿಜಿಟಲ್ ಆಕಾರ ಸೃಷ್ಟಿಸಲಾಗುತ್ತಿದೆ. ಅನುವಾದವೂ ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಕೆಗೆ ಆದ್ಯತೆ ಕೊಡಬೇಕಾಗಿದ್ದು, ಇದಕ್ಕೆ ಪೂರಕವಾಗಿ ಭಾಷಾ ಬೋಧನೆಯ ಪರಿಕರ ತಯಾರಿಸಲಾಗುತ್ತಿದೆ. ಜತೆಗೆ, 7 ಪ್ರಾದೇಶಿಕ ಕೇಂದ್ರಗಳಲ್ಲಿ ಶಿಕ್ಷಕರು, ಸಂಶೋಧಕರಿಗೆ  ಆಧುನಿಕ ಪ್ರಯೋಗಾಲಯವನ್ನು ಬಳಸಿಕೊಂಡು ಭಾಷಾ ಬೋಧನಾ ತರಬೇತಿ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

 
ಶಾಸ್ತ್ರೀಯ ಕನ್ನಡ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗಿಲ್ಲ

ಸಿಐಐಎಲ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡುವ ಕುರಿತು ಹಿಂದಿನಿಂದಲೂ ಸಾಕಷ್ಟು ಪ್ರಯತ್ನಗಳು ನಡೆದಿವೆ. ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಚಿಂತನೆ ಇದೆ ಎಂದು ಪ್ರೊ.ಬಸವರಾಜ ಕೊಡಗುಂಟಿ ತಿಳಿಸಿದರು.
ಈ ಕನ್ನಡ ಕೇಂದ್ರದಿಂದ ವಿಜ್ಞಾನ-ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ವಿಶಿಷ್ಟ, ವಿನೂತನ ಕೆಲಸಗಳು ಆಗಬೇಕಿತ್ತು. ಆದರೆ, ಆ ರೀತಿ ಆಗಿಲ್ಲ. ಹೆಚ್ಚು ಕೆಲಸ ಮಾಡಿ, ಹೆಚ್ಚಿನ ಅನುದಾನ ಕೇಳಿದರೆ ಅದು ದೊರೆಯುತ್ತದೆ. ವರ್ಷದಿಂದ ವರ್ಷಕ್ಕೆ ವಿವಿಧ ಕ್ರಿಯಾಯೋಜನೆಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಅದಕ್ಕೆ ತಕ್ಕಂತೆ ಅನುದಾನವೂ ಸಿಗುತ್ತಿತ್ತು. ಆದರೆ, ಅದು ಆಗಿಲ್ಲ. ಹೀಗಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಅನುದಾನವೂ ಬಂದಿಲ್ಲ ಎಂದರು.
ಭಾಷಾ ಅಭಿಮಾನ ಬೇರೆ, ಭಾಷೆಯ ವೈಜ್ಞಾನಿಕ ಅಧ್ಯಯನ ಬೇರೆ. ಅವುಗಳೆರಡೂ ಸಮ್ಮಿಲನ ಆಗಲ್ಲ. ಜಾಗತಿಕವಾಗಿ ನಿಂತುಕೊಂಡು ಕನ್ನಡ ಭಾಷಾ ಅಧ್ಯಯನವನ್ನು ಅವಲೋಕಿಸಿಕೊಳ್ಳಬೇಕಿದೆ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಜಾಗ ನೀಡಲು ಮೈಸೂರು ವಿಶ್ವವಿದ್ಯಾಲಯ ಮುಂದಿದೆ. ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಕನ್ನಡಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡಲಾಗುವುದು ಎಂದು ತಿಳಿಸಿದರು.