ಸರಗೂರು ತಾಲ್ಲೂಕಿನ ಹೆಗ್ಗನೂರಿನಲ್ಲಿ ಶ್ರೀ ಮಹೇಶ್ವರಿ ಕಾಳಮ್ಮನವರ ಉತ್ಸವ ನಡೆಯಿತು.
- ಹೆಗ್ಗನೂರಿನಲ್ಲಿ ಸಂಭ್ರಮದ ಜಾತ್ರೋತ್ಸವ
ಸರಗೂರು : ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಬುಧವಾರ ಶ್ರೀ ಮಹೇಶ್ವರಿ ಕಾಳಮ್ಮನವರ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು.
ದೇವಸ್ಥಾನದಲ್ಲಿ ವಿಶೇಷ ಹೋಮ, ಮುಂಜಾನೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು. ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳದ ಕೆರೆಯಿಂದ ಗಂಗಾಪೂಜೆ ಮಾಡಿ ನಂತರ ಭಕ್ತರು ಬಾಯಿಬೀಗ ಹರಕೆ, ಮುಡಿ ಮುಗಿಸಿ ಸತ್ತಿಗೆಗಳು, ನಂದಿಧ್ವಜ ಉಮಾ ಮಹೇಶ್ವರಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪಂಜಿನಸೇವೆ, ನಾದಸ್ವರ, ವಾದ್ಯಗೋಷ್ಠಿ, ಬ್ಯಾಂಡ್ ಸೆಟ್, ವೀರಗಾಸೆ ನೃತ್ಯ, ಗಾರುಡಿಗೊಂಬೆ, ಕೋಲಾಟ, ನೃತ್ಯವಾದ್ಯ, ಚಂಡಿವಾದ್ಯ, ಮಂಗಳವಾದ್ಯ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಉಯ್ಯಲೆಸೇವೆ ಮೂಲಕ ಗರ್ಭಗುಡಿ ಸೇರಿಸಿ ಪಟ್ಟಕ್ಕೆ ಕುಳಿತು ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 1 ಗಂಟೆಗೆ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿತು.
ಮಂಗಳವಾರ ಶಾಸಕ ಅನೀಲ್ ಚಿಕ್ಕಮಾದು ಕುಟುಂಬ ಸಮೇತರಾಗಿ ಆಗಮಿಸಿ ತಾಯಿ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಬುಧವಾರ ಮಧ್ಯಾಹ್ನ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಾತ್ರೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಜೀ ಸರಿಗಮಪ ಖ್ಯಾತಿಯ ಗಾಯಕ ಗಾಯಕಿಯರು, ಕಾಮಿಡಿ ಕಿಲಾಡಿ ಶೋ ಸೆಲೆಬ್ರಿಟಿಗಳಾದ ಗಗನಾ ಮತ್ತು ಗಿಲ್ಲಿ ನಟ ಅವರಿಂದ ರಸಮಂಜರಿ, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,
ಜಾತ್ರಾ ಮಹೋತ್ಸವದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹೆಗ್ಗನೂರು ಗ್ರಾಮದ ಎಲ್ಲ ಸಮುದಾಯದ ಯಜಮಾನರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.