ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಿವಯೋಗಿ ಶ್ರೀ ಶಿವಪಾದಸ್ವಾಮಿ ಅವರ ಕಂಚಿನ ಪುತ್ಥಳಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣಗೊಳಿಸಿದರು. ಶ್ರೀಗುರುಶಾಂತಸ್ವಾಮೀಜಿ, ಟಿ.ಎಸ್.ಶ್ರೀವತ್ಸ, ಎಚ್.ವಿ.ರಾಜೀವ್, ಎಂ.ಕೆ.ಸೋಮಶೇಖರ್ ಇತರರು ಇದ್ದರು.  
ಮೈಸೂರು

ವಚನಗಳಲ್ಲಿ ಭಾರತದ ಮೂಲತತ್ವ ಅಡಕ

ಪ್ರಮುಖ ಮುಖ್ಯಾಂಶಗಳು

  • ಶಿವಯೋಗಿ ಶ್ರೀ ಶಿವಪಾದಸ್ವಾಮಿ ಕಂಚಿನ ಪುತ್ಥಳಿ ಅನಾವರಣ
  • ಆಧ್ಯಾತ್ಮಕ ನೆಲೆಯಲ್ಲೇ ನಿಂತಿಕೊಂಡಿದೆ ಆಧುನಿಕ ಸಮಾಜ
  • ವಚನಗಳು ಧರ್ಮವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ
ಮೈಸೂರು: ಹನ್ನೇರಡನೇ ಶತಮಾನದಲ್ಲೇ ಬಸವಣ್ಣನವರು ಧರ್ಮವನ್ನು ಅರ್ಥೈಸುವ ಕೆಲಸವನ್ನು ಮಾಡಿದರು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಕುದೇರು ಮಠದ ಬಳಿ ಶನಿವಾರ ಆಯೋಜಿಸಿದ್ದ ಶ್ರೀಶಿವಪಾದ ಗುರುಸೇವಾ ನಂದಿಧ್ವಜ ಸಂಘದ 89ನೇ ವಾರ್ಷಿಕೋತ್ಸವ, ಶಿವಯೋಗಿ ಶ್ರೀ ಶಿವಪಾದಸ್ವಾಮಿ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಮೂಲ ತತ್ವ ವಚನದಲ್ಲಿ ಇದೆ. ಇದುವೇ ಶ್ರೇಷ್ಠ ಕೊಡುಗೆಯಾಗಿದೆ. ಉತ್ತಮ ವಚನಗಳಲ್ಲಿ ಭಾರತೀಯತೆ ಅಡಗಿದೆ. ಇದು ಧರ್ಮವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. 
ಅನೇಕ ಮಠಗಳು ಧರ್ಮಸೇವೆಯೊಂದಿಗೆ ಪರಂಪರೆಯನ್ನೂ ಉಳಿಸಿಕೊಂಡು ಬಂದಿವೆ. ದಾಸೋಹ, ಶಿಕ್ಷಣ, ಆರೋಗ್ಯ ನೀಡುವ ಮೂಲಕ ಮಠಮಾನ್ಯಗಳು ಉತ್ತಮ ಕೊಡುಗೆಯನ್ನು ಸಮಾಜಕ್ಕೆ ನೀಡಿವೆ ಎಂದರು.
ಆಧ್ಯಾತ್ಮಿಕ ನೆಲೆಯಲ್ಲಿ ಭಾರತ ನಿರ್ಮಾಣವಾಗಿದೆ. ಧರ್ಮ ಬೆಳವಣಿಗೆ, ಅದರ ರಕ್ಷಣೆ ಕೆಲಸವನ್ನು ಮಠಗಳು ಶತಮಾನಗಳಿಂದ ಮಾಡಿಕೊಂಡು ಬಂದಿವೆ. ಇದರ ಆಧಾರದ ಮೇಲೆಯೂ ಆಧುನಿಕ ಸಮಾಜವೂ ನಿಂತುಕೊಂಡಿದೆ ಎಂದು ಹೇಳಿದರು. 
ವಿಕಸಿತ ಭಾರತದತ್ತ ದೇಶ ಮುಖ ಮಾಡಿದೆ. ಭಾರತೀಯತೆ ಅಭಿವೃದ್ಧಿಗೆ ಗುರುಪರಂಪರೆ ಆಧಾರಿತ ಮಠಗಳು ಸೂಕ್ತ ಮಾರ್ಗದರ್ಶನ ಮಾಡಬೇಕಿದೆ ಎಂದು ಸಲಹೆ ನೀಡಿದರು. 
ಕುದೇರು ಮಠದಲ್ಲಿ ದಾಸೋಹ ಕೇಂದ್ರ ನಿರ್ಮಾಣಕ್ಕೆ ನೆರವು ನೀಡುವಂತೆ ಕೋರಲಾಗಿದ್ದು, ಮುಂದಿನ ದಿನಗಳಲ್ಲಿ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಜಗತ್ತಿಗೆ ದಾಸೋಹ ಪರಿಕಲ್ಪನೆ ಪರಿಚಯಿಸಿದ್ದು ಮಠಗಳು. ಅದರಲ್ಲೂ ವೀರಶೈವ ಲಿಂಗಾಯತ ಮಠಗಳು ದಾಸೋಹಕ್ಕೆ ಹೆಸರುವಾಸಿಯಾಗಿವೆ. ಶಿಕ್ಷಣ, ವಸತಿ,ಆರೋಗ್ಯ ಕಲ್ಪಿಸಿಕೊಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ ಎಂದರು.
ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪ್ರದೀಪ್‌ಕುಮಾರ್ ಇತರರು ಇದ್ದರು.