ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ವಿವಿ ಪ್ರೊ. ಕೆಂಪರಾಜು, ಪ್ರೊ. ಕೆಸ್ತೂರು ಎಸ್. ಗಿರೀಶ್ ಅವರಿಗೆ ಭ್ರಮರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆ. ವಿಜಯರಾಘವನ್, ಯದುವೀರ್, ಯುಕ್ತೇಶಾನಂದಜೀ ಇದ್ದರು.
ಇಂದಿನ ಜಗತ್ತು ಅನೇಕ ಸವಾಲುಗಳಿಂದ ಕೂಡಿದ್ದೂ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೂ ಮಹಾಪ್ರವಾಹದಂತೆ ಬರುತ್ತಿರುವುದರಿಂದ ವಿಶ್ವದಾದ್ಯಂತ ಅನೇಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಉಂಟುಮಾಡುತ್ತಿದೆ ಎಂದು ಭಾರತ ಸರ್ಕಾರದ ಮಾಜಿ ಮುಖ್ಯ ವೈಜ್ಞಾನಿಕ ಸಲಹೆಗಾರ ಪದ್ಮಶ್ರೀ ಕೆ. ವಿಜಯರಾಘವನ್ ತಿಳಿಸಿದರು.
ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ವೈ.ಟಿ. ಮತ್ತು ಮಾಧುರಿ ತಾತಾಚಾರಿ ಭ್ರಮರ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭ್ರಮರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೈವಿಕ ತಂತ್ರಜ್ಞಾನದಲ್ಲಿಯೂ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ. ಆದ್ದರಿಂದ ಇದು ಯುವಜನತೆಗೆ ಸವಾಲುಗಳ ಮತ್ತು ಅನಿಶ್ಚಿತತೆಯ ಕಾಲವೆನ್ನಬಹುದು. ಆದರೂ ಇದು ಮಹತ್ವದ ಆಲೋಚನೆಗಳು ಅರಳುವ ಕಾಲ. ಏಕೆಂದರೆ ಸವಾಲುಗಳ ಸಮಯದಲ್ಲೇ ಜನರು ಹೊಸ ಪರಿಹಾರಗಳನ್ನು ಕಂಡುಹಿಡಿಯುತ್ತಾರೆ ಎಂದು ತಿಳಿಸಿದರು.
ಹೊಸ ಆಲೋಚನೆಗಳು ಬೆಳಕಿಗೆ ಬರಲು ವಿಶ್ವವಿದ್ಯಾನಿಲಯಗಳಲ್ಲಿ ಸೂಕ್ತ ಪರಿಸರ ನಿರ್ಮಾಣವಾಗಬೇಕು. ಪರಸ್ಪರ ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಅವುಗಳನ್ನು ವಿಮರ್ಶಿಸಬೇಕು, ವಿಶ್ಲೇಷಿಸಬೇಕು, ಅಗತ್ಯವಿದ್ದರೆ ತಿದ್ದುಪಡಿ ಮಾಡಬೇಕು ಎಂದರು.
ಚಿಕಿತ್ಸಾ ಪೂರ್ವ ಪ್ರಯೋಗಗಳ ಮೂಲಕ ನಾಗರಹಾವು ಕಚ್ಚುವಿಕೆಯಿಂದ ಜೀವಗಳನ್ನು ಉಳಿಸಬಹುದು ಮತ್ತು ವೈಪರ್ ಹಾಗೂ ಇತರ ಹಾವುಗಳ ಕಚ್ಚುವಿಕೆಯಿಂದ ಅಂಗವಿಚ್ಛೇದನವನ್ನು ತಡೆಯಬಹುದು ಎನ್ನುವ ಸಂಶೋಧನೆಯನ್ನು ನಡೆಸಿರುವ ಮೈಸೂರು ವಿವಿ ಪ್ರೊ. ಕೆಂಪರಾಜು, ಪ್ರೊ. ಕೆಸ್ತೂರು ಎಸ್. ಗಿರೀಶ್ ಅವರಿಗೆ ಇದೇ ಸಂದರ್ಭದಲ್ಲಿ ಭ್ರಮರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಮಠದ ಯುಕ್ತೇಶಾನಂದಜೀ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬಯೋಕೆಮಿಸ್ಟ್ರಿ ವಿಭಾಗದ ಪ್ರೊ.ಪಿ.ಎನ್.ರಂಗರಾಜನ್, ಪ್ರಮೋದ್ ಕುಮಾರ್, ಭ್ರಮರ ಟ್ರಸ್ಟ್‌ನ ಪ್ರೊ. ಆರ್.ಶ್ರೀನಿವಾಸನ್ ಇದ್ದರು.