ಸರ್ಕಾರ ವಿದ್ಯುತ್ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬನ್ನೂರಿನ ಸೆಸ್ಕ್ ಕಚೇರಿಯ ಮುಂಭಾಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನೌಕರರ ಒಕ್ಕೂಟದ ವತಿಯಿಂದ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ಜರುಗಿತು. ಅಧ್ಯಕ್ಷ ಶ್ರೀನಿವಾಸ್, ಎಇಇ ಹರ್ಷನ್, ಎಇ ಸಂದೇಶ್‌ಗೌಡ, ಜೆಇ ಯೋಗೇಶ್, ಎಇ ಧನುಷ್, ಕಾರ್ಯದರ್ಶಿ ಧನ್‌ರಾಜ್, ನಾರಾಯಣ್ ಸೇರಿದಂತೆ ಪ್ರಮುಖರು ಇದ್ದರು.
ಬನ್ನೂರು: ವಿದ್ಯುತ್ ಪೂರೈಕೆ ಜಾಲವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ನಿಲುವನ್ನು ಖಂಡಿಸಿ ಬನ್ನೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನೌಕರರ ಸಂಘ (659)ದ ಒಕ್ಕೂಟದ ವತಿಯಿಂದ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಚೇರಿಯ ಮುಂಭಾಗ ಜಮಾಯಿಸಿದ ನೌಕರರು ಯಾವುದೇ ಕಾರಣಕ್ಕೂ ಸರ್ಕಾರ ವಿದ್ಯುತ್ ಪೂರೈಕೆ ಜಾಲವನ್ನು ಖಾಸಗಿ ಕಂಪನಿಗೆ ವಹಿಸಲು ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದು ಕೇವಲ ನೌಕರರ ಮೇಲೆ ಮಾತ್ರವಲ್ಲ ಸಮಾಜದ ಮೇಲೂ ಪರಿಣಾಮ ಉಂಟುಮಾಡುತ್ತದೆ. ಸರ್ಕಾರದಿಂದ ದೊರೆಯುತ್ತಿರುವ ಭಾಗ್ಯಜ್ಯೋತಿ, ಗೃಹಜ್ಯೋತಿ, ಭಾಗ್ಯಕುಟೀರದಂತಹ ಯೋಜನೆಗಳು ರದ್ದಾಗುತ್ತವೆ. ಉದ್ಯೋಗದ ಮೇಲೂ ಹೊಡೆತ ಬೀಳಲಿದ್ದು, ಸರ್ಕಾರಿ ನೌಕರಿ ಪಡೆಯುವ ಯುವಕರ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.
ಜತೆಗೆ ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ವಿದ್ಯುತ್‌ನ್ನು ಕಡಿತಗೊಳಿಸಿ, ಮೀಟರ್ ಅಳವಡಿಸುವ ವ್ಯವಸ್ಥೆಯನ್ನು ಜಾರಿ ಮಾಡಿ, ರೈತರ ಮೇಲೂ ವಿದ್ಯುತ್ ಬರೆಯನ್ನು ಎಳೆಯುತ್ತಾರೆ. ಇದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡದೇ ಸರ್ಕಾರಿ ಸೌಮ್ಯದಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ನಾರಾಯಣ್ ಮಾತನಾಡಿ, ಸರ್ಕಾರದ ಸ್ವಾಮ್ಯದಲ್ಲಿರುವ ವಿದ್ಯುತ್ ಇಲಾಖೆಯ ಸಮಸ್ಯೆಯನ್ನು ಸರ್ಕಾರವೇ ಬಗೆಹರಿಸಲು ಆಗುತ್ತಿಲ್ಲ. ಒಂದು ವೇಳೆ ಖಾಸಗಿಗೆ ವಹಿಸಿದರೆ ಸಮಸ್ಯೆಗಳು ಬೃಹತ್ತಾಗಿ ಬೆಳೆಯುತ್ತದೆಯೇ ವಿನಾ ಸಮಸ್ಯೆಗಳು ಬಗೆಹರಿಯಲ್ಲ. ಖಾಸಗೀಕರಣ ಮಾಡಿದ್ದೇ ಆದಲ್ಲಿ ಅದು ಜನರ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಇಇ ಹರ್ಷನ್, ಎಇ ಸಂದೇಶ್‌ಗೌಡ, ಜೆಇ ಯೋಗೇಶ್, ಎಇ ಧನುಷ್, ಕಾರ್ಯದರ್ಶಿ ಧನರಾಜ್, ಹರ್ಷಿತ್, ಜಯಶೀಲಾ, ಅರುಣ್‌ಕುಮಾರ್, ಗಂಗಾಧರ್, ಪರಸಪ್ಪ, ಶಿವರಾಮೇಗೌಡ, ರಮೇಶ್ ಸೇರಿದಂತೆ ರೈತಾಪಿ ವರ್ಗದವರು, ವಿದ್ಯುತ್ ಗುತ್ತಿಗೆದಾರರು, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಇದ್ದರು.