ನಂಜನಗೂಡು ನಗರ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿ ಪೂಜೆ ಸಲ್ಲಿಸಿದರು. ಕಳಲೆ ಕೇಶವಮೂರ್ತಿ, ಶ್ರೀಕಂಠ ಸ್ವಾಮಿ ಇತರರು ಇದ್ದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಂಜನಗೂಡು ತಾಲೂಕು ಗುರುಭವನ ನಿರ್ಮಾಣದ ಕನಸಿಗೆ ಇದೀಗ ಮರುಜೀವ ಬಂದಿದೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಆ.12ರಂದು ‘ನನಸಾಗದ ಗುರುಭವನ ನಿರ್ಮಾಣ ಕನಸು’ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿರುವ ಶಾಸಕ ದರ್ಶನ್ ಧ್ರುವನಾರಾಯಣ ಅವರು ಗುರುಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗುರುಭವನ ನಿರ್ಮಾಣ ಸಂಬಂಧ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶೀಘ್ರದಲ್ಲಿಯೇ ಕಾಮಗಾರಿ ಆರಂಭ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ನಗರಸಭಾ ವ್ಯಾಪ್ತಿಯ ವಾರ್ಡ್ ನಂ.3ರ ಸಿದ್ದಪ್ಪಾಜಿ ದೇವಾಲಯದ ಬಳಿ ಹಾಗೂ ಗುಂಡ್ಲು ನದಿ ಬಳಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳು, ಆಟದ ಮೈದಾನ ಅಭಿವೃದ್ಧಿ ಕಾಮಗಾರಿಗಳಿಗೆ 25 ಲಕ್ಷ ರೂ. ಮೊತ್ತದ ಕಾಮಗಾರಿ, ನಗರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯಡಿ ವಾರ್ಡ್ ನಂ.7ರ ಚಾಮರಾಜನಗರ ಬೈಪಾಸ್ ರಸ್ತೆಯಿಂದ ಲಿಂಗಾಭಟ್ಟರ ಗುಡಿ, ಕಾಶಿ ವಿಶ್ವೇಶ್ವರ ದೇವಸ್ಥಾನದವರೆಗೆ 45 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ನಂ.27ರ ಅಶೋಕಪುರಂ ಆದಿಶಕ್ತಿ ದೇವಸ್ಥಾನದ ಹತ್ತಿರ ಅಶೋಕಪುರಂ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೂ ಇದೇ ವೇಳೆ ಚಾಲನೆ ನೀಡಿದರು.
ಮಾಜಿ ಶಾಸಕರು ಕಳಲೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಪೌರಾಯುಕ್ತರಾದ ಬಸವರಾಜ್, ಮುಖಂಡರಾದ ಶ್ರೀಧರ್, ದೇವರಾಜು, ಪ್ರಕಾಶ್, ಖಾಲಿದ್ ಅಹಮದ್, ವಿಜಯ್ ಲಕ್ಷ್ಮೀ, ಕುಮಾರ್, ಚಂದ್ರು ಇತರರು ಇದ್ದರು.