ಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಮದಲ್ಲಿ ಸಂಕ್ರಾಂತಿಯ ಅಂಗವಾಗಿ ಗುರುವಾರ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. (ಚಿತ್ರ: ಕೆ.ಎಚ್.ಚಂದ್ರು)
ಮೈಸೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ತಾಲೂಕಿನ ಸಿದ್ದಲಿಂಗಪುರದಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸಾಂಪ್ರದಾಯಿಕ ಆಚರಣೆ ನಡೆಯಿತು.
ಧಗಧಗನೆ ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬಂದ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ಜನರು ಕಣ್ತುಂಬಿಕೊಂಡರು. ಇದನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ರಸ್ತೆಯ ಮೇಲೆ ಬೆಂಕಿ ಮೇಲೆದ್ದಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು ಸುಮಾರು 71 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ, ಮೈತೊಳೆದು ಶುಚಿಗೊಳಿಸಿದ ರಾಸುಗಳ ಕೋಡುಗಳಿಗೆ ಬಣ್ಣ ಬಳಿದು ಅಂದ ಹೆಚ್ಚಿಸಿದರು. ಕೊರಳು, ದೇಹವನ್ನು ಹೂವಿನ ಮಾಲೆಗಳಿಂದ ಅಲಂಕರಿಸಿ ಬಲೂನುಗಳನ್ನು ಕಟ್ಟಿ ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು.