ಸರಗೂರಿನಲ್ಲಿ ಗುರುವಾರ ಭೀಮ ಕೋರೆಗಾಂವ್ 208ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ರಾಜಣ್ಣ, ಶಿವಣ್ಣ, ಸಣ್ಣಸ್ವಾಮಿ ಇತ್ತರರಿದ್ದರು.
ಸರಗೂರು: ಆದಿ ಕರ್ನಾಟಕ ಮಹಾಸಭಾ ತಾಲೂಕು ಘಟಕದಿಂದ ಪಟ್ಟಣದಲ್ಲಿ ಗುರುವಾರ ಬೈಕ್ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸುವ ಮೂಲಕ ಮಹಾರ್ ವೀರಯೋಧರ ಭೀಮಾ ಕೋರೆಗಾಂವ್ 208ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿ ಜಮಾವಣೆಗೊಂಡ ದಲಿತ ಸಮಾಜದ ಮುಖಂಡರು ಬೈಕ್ ರ‌್ಯಾಲಿಯಲ್ಲಿ ಹೊರಟ ಮೆರವಣಿಗೆಯು ಪಟ್ಟಣ ಪಂಚಾಯಿತಿ ಮುಂದೆ ಕೊನೆಗೊಂಡಿತು. ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪಶ್ಯತೆ, ಮೇಲು ಕೀಳುಗಳ ವಿರುದ್ಧ ಹೋರಾಡಲು 28 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಮುಂದಾದ ಮಹಾರ್ ಸೈನಿಕರ ಧೈರ್ಯ ಸಾಹಸ ಮೆಚ್ಚುವಂತಾಗಿದೆ ಎಂದು ಹೇಳಿದರು.
ಮಹಾಸಭಾದ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಹೋರಾಟ. ಇದು ಚರಿತ್ರಾರ್ಹ ಐತಿಹಾಸಿಕ ವಿಜಯೋತ್ಸವವಾಗಿದೆ. ಬ್ರಿಟಿಷರು ಭಾರತ ದೇಶದಲ್ಲಿ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಬರುತ್ತಿದ್ದ ಕಾಲಘಟ್ಟವದು. ಮನುವಾದಿ ಪೇಶ್ವೆಗಳ ದುರಾಡಳಿತದ ವಿರುದ್ಧ ಸಿಡಿದೆದ್ದರು ಎಂದು ತಿಳಿಸಿದರು.
ಗೌರವಾಧ್ಯಕ್ಷ ಇದಿಯಪ್ಪ, ಉಪಾಧ್ಯಕ್ಷರಾದ ಹಳೆಯೂರು ಚಿನ್ನಯ್ಯ, ಕಾಳಸ್ವಾಮಿ, ಶಿವಣ್ಣ, ಖಜಾಂಚಿ ಶ್ರೀನಿವಾಸ್, ಮಸಹಳ್ಳಿ ಸೂರ್ಯ ಕುಮಾರ್,ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ವೆಂಕಟಾಚಲ ಮಹೇಶ್, ತುಂಬಸೋಗೆ ನಾಗಣ್ಣ, ಶ್ರೀನಿವಾಸ್, ಸರಗೂರು ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ಕೂಡಗಿ ಗೋವಿಂದರಾಜು, ಬಿಲ್ಲಯ್ಯ,ಹುನಗಹಳ್ಳಿ ಗೋವಿಂದ , ಪಾಟೀಲ್ ಇತರರಿದ್ದರು.