ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ‘ರಾಸಾಯನಿಕ ವಿಜ್ಞಾನದಲ್ಲಿ ಪ್ರಸ್ತುತ ಸಂಶೋಧನೆ ಮತ್ತು ನಾವಿನ್ಯತೆಗಳು’ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಪ್ರೊ.ಕೆ. ಮಂಟೇಲಿಂಗು, ಡಾ. ಪ್ರಶಾಂತ್ ಎಂ. ವಿಶ್ವನಾಥ್, ಡಾ.ರೇಚಣ್ಣ, ಡಾ. ಇ.ವಿಜಯಶೇಖರ್ ಇದ್ದರು. 
ಮೈಸೂರು

ದೇಶದ ಪ್ರಗತಿ ಸಂಶೋಧನೆಯಿಂದ ಮಾತ್ರ ಸಾಧ್ಯ : ವಿಶ್ರಾಂತ ಕುಲಪತಿ ಡಾ. ಕೆ.ಎಸ್.ರಂಗಪ್ಪ

ಮೈಸೂರು: ದೇಶದ ಪ್ರಗತಿ ಹಾಗೂ ರಕ್ಷಣೆ ಸಂಶೋಧನೆಯಿಂದ ಮಾತ್ರ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ ‘ರಾಸಾಯನಿಕ ವಿಜ್ಞಾನದಲ್ಲಿ ಪ್ರಸ್ತುತ ಸಂಶೋಧನೆ ಮತ್ತು ನಾವಿನ್ಯತೆಗಳು’ ಕುರಿತು ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯುವಜನತೆ ಸಂಶೋಧನೆಯಲ್ಲಿ ದೃಢವಾಗಿ ಮುಂದುವರೆದು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ರಸಾಯನ ವಿಜ್ಞಾನ ನಾವಿನ್ಯತೆಗಳಿಗೆ ಬೆನ್ನೆಲುಬು. ವಿಜ್ಞಾನ ಕೇವಲ ಫಲಿತಾಂಶಗಳನ್ನು ಪಡೆಯುವುದರ ಬಗ್ಗೆ ವಿವರಿಸುವು ದಿಲ್ಲ. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ವಿವರಿಸುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಪ್ರೊ.ಕೆ. ಮಂಟೇಲಿಂಗು ಮಾತನಾಡಿ, ಇಂತಹ ಸಮ್ಮೇಳನವು ವೈಜ್ಞಾನಿಕ ಚಿಂತನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಭವಿಷ್ಯತ್ತಿನ ಸಂದರ್ಭದಲ್ಲಿ ಹಸಿರು ಮತ್ತು ಪರಿಸರ ಸ್ನೇಹಿ ಶಕ್ತಿಗಳು ಮುಖ್ಯವಾಗುತ್ತವೆ ಎಂದು ಹೇಳಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಎಂ. ವಿಶ್ವನಾಥ್ ಮಾತನಾಡಿ, ರಸಾಯನಶಾಸ್ತ್ರವು ಅನ್ವೇಷಣೆಯ ಹೃದಯವಾಗಿದೆ. ರಸಾಯನಶಾಸ್ತ್ರದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಕುತೂಹಲ ಬೆಳೆಸಿಕೊಂಡು ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ರೇಚಣ್ಣ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಇ.ವಿಜಯಶೇಖರ್ ಹಾಗೂ ಇತರರು ಇದ್ದರು.