ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ‘ಭಾರತೀಯ ಸಂವಿಧಾನಕ್ಕೆ ಏಳು ದಶಕಗಳು: ಸಿದ್ಧಾಂತ, ಸತ್ಯಗಳು, ಬಲವರ್ಧನೆ’ ಕುರಿತು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ  
ಮೈಸೂರು

ಸದೃಢ ಸಂವಿಧಾನದಿಂದಲೇ ದೇಶದ ಪ್ರಗತಿ: ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎನ್.ನಗರೇಶ್

ಪ್ರಮುಖ ಮುಖ್ಯಾಂಶಗಳು

  • ‘ಭಾರತೀಯ ಸಂವಿಧಾನಕ್ಕೆ ಏಳು ದಶಕಗಳು
  • ಸಂವಿಧಾನವೂ ಸದೃಢವಾಗಿ ಬಂಡೆಗಲ್ಲಿನಂತೆ ನಿಂತಿದೆ
  • ಸಮಾಜವಾದ ಆಶಯದಡಿ ಭಾರತೀಯ ಸಂವಿಧಾನ
ಮೈಸೂರು: ಸದೃಢ ಸಂವಿಧಾನದಿಂದಲೇ ಭಾರತವು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಇದರಿಂದಲೇ ವಿಶ್ವದಲ್ಲೇ ಭಾರತ 4ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಹ ಕಾರಣವಾಗಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎನ್.ನಗರೇಶ್ ಹೇಳಿದರು.
ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ‘ಭಾರತೀಯ ಸಂವಿಧಾನಕ್ಕೆ ಏಳು ದಶಕಗಳು: ಸಿದ್ಧಾಂತ, ಸತ್ಯಗಳು, ಬಲವರ್ಧನೆ’ ಕುರಿತು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
1947ರ ಸಂದರ್ಭದಲ್ಲಿ ಭಾರತವು ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಬೇರೆ ದೇಶಗಳ ಎದುರು ಬೇಡುವಂತಾಗಿತ್ತು. ಇದೀಗ ಕೊಡುವ ರಾಷ್ಟ್ರವಾಗಿ ಬೆಳೆದಿದೆ. ಇದು ಸಾಧ್ಯವಾಗಿದ್ದು ಭಾರತದ ಸಂವಿಧಾನದಿಂದ ಎಂದರು.
17ನೇ ಶತಮಾನದಲ್ಲಿ ಜಗತ್ತಿನ ಜಿಡಿಪಿಯಲ್ಲಿ ಭಾರತದ ಪಾಲು ಶೇ.21ರಷ್ಟಿತ್ತು. ಬ್ರಿಟಿಷರ ಆಳ್ವಿಕೆಯಿಂದ ಅದು ಶೇ.3ಕ್ಕೆ ಇಳಿಕೆಯಾಯಿತು. 1947ರಲ್ಲಿ ದೇಶದ ಸಾಕ್ಷರತೆ ಪ್ರಮಾಣ ಶೇ.18ರಷ್ಟಿತ್ತು. ಆಹಾರ, ಔಷಧಕ್ಕಾಗಿ ಬೇರೆ ದೇಶಗಳತ್ತ ನೋಡಬೇಕಿತ್ತು. ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳೂ ಇರಲಿಲ್ಲ. ಆದರೀಗ ದೇಶದ ಚಿತ್ರಣವೇ ಬದಲಾಗಿದೆ. ಅಜಗಜಾಂತರ ವ್ಯತ್ಯಾಸ ಕಣ್ಮುಂದಿದೆ. ಈ ಎಲ್ಲ ಸಾಧನೆ ಹಿಂದೆ ಸಂವಿಧಾನದ ಹೆಜ್ಜೆ ಗುರುತುಗಳಿವೆ ಎಂದರು.
ಸ್ವಾತಂತ್ರೃ ಬಂದ ಬಳಿಕ ಭಾರತವು ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಳ್ಳಲಾಯಿತು. ಆಗ ಅಪಹಾಸ್ಯ ಮಾಡಿದ ಯೂರೋಪ ದೇಶದವರು, ಭಾರತದಲ್ಲಿ ಹೆಚ್ಚು ದಿನ ಪ್ರಜಾಪ್ರಭುತ್ವ ಉಳಿಯಲ್ಲ. ಆ ದೇಶ ಸಂಪೂರ್ಣವಾಗಿ ನಾಶವಾಗಿ ಹೋಗಲಿದೆ ಎಂದು ಮೂಗುಮುರಿದಿದ್ದರು. ಆದರೆ, ಅವರ ಭವಿಷ್ಯ ಸುಳ್ಳಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ಸಿಯಾಗಿ ಮುನ್ನಡೆಯುತ್ತದೆ. ಸಂವಿಧಾನವೂ ಸದೃಢವಾಗಿ ಬಂಡೆಗಲ್ಲಿನಂತೆ ನಿಂತಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲೇ ಭಾರತವು 4ನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಇದು ಸಾಮಾನ್ಯ ಸಂಗತಿಯಲ್ಲ. ಜಾಗತಿಕ ಸಾಕ್ಷರತೆ ಪ್ರಮಾಣ ಶೇ.70ರಷ್ಟಿದ್ದರೆ ಭಾರತದಲ್ಲಿ ಇದರ ಪ್ರಮಾಣ ಶೇ.78ರಷ್ಟಿದೆ.
ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯಿಂದಾಗಿ ಕರೊನಾ ಕಾಲದಲ್ಲಿ ಮುಂದುವರಿದ ಫ್ರಾನ್ಸ್ ಸೇರಿದಂತೆ 37 ದೇಶಗಳಿಗೆ ಕೋವಿಡ್ ಲಸಿಕೆಯನ್ನು ಭಾರತವೊಂದೇ ಪೂರೈಕೆ ಮಾಡಿದೆ. ವೈದ್ಯಕೀಯ ಪ್ರವಾಸೋದ್ಯಮ ವೃದ್ಧಿಯಿಂದ ಭಾರತಕ್ಕೆ ಯೂರೋಪ್‌ನಿಂದ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ ಎಂದರು.
ಭಾರತ ಎಲ್ಲ ಕ್ಷೇತ್ರಗಳಲ್ಲೂ ಗಣನೀಯವಾಗಿ ಪ್ರಗತಿ ಕಂಡಿದೆ. ಆಹಾರ ಸೇರಿದಂತೆ ಬಹಳಷ್ಟು ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದೆ. ಸುಸ್ಥಿರ ಅಭಿವೃದ್ಧಿಯಾಗಿದೆ. ಇದಕ್ಕೆ ಕಾರಣ ಸಂವಿಧಾನ. ಇಂತಹ ಅವಕಾಶಗಳು, ವೇದಿಕೆಗಳನ್ನು ಅದುವೇ ಕಲ್ಪಿಸಿಕೊಟ್ಟಿದೆ.
ಸಮಾಜವಾದ ಆಶಯದಡಿ ಭಾರತೀಯ ಸಂವಿಧಾನ ರಚನೆಗೊಂಡಿದೆ. ಎಡಪಂಥೀಯ ರಾಷ್ಟ್ರಗಳಲ್ಲಿ ಸಮಾಜವಾದ ನೆಲೆ-ಹಿನ್ನೆಲೆ ಭಿನ್ನವಾಗಿದೆ. ಅಲ್ಲಿ ಎಲ್ಲ ಕ್ಷೇತ್ರಗಳ ನಿಯಂತ್ರಣ ಸರ್ಕಾರದ ಕೈಯಲ್ಲಿದೆ. ಆದರೆ, ಭಾರತದಲ್ಲಿ ಕೆಲ ನಿಯಂತ್ರಣಗಳು ರಾಜ್ಯ ಮತ್ತು ಇನ್ನಷ್ಟು ನಿಯಂತ್ರಣ ಕೇಂದ್ರ ಸರ್ಕಾರದಡಿ ಇದೆ. ಇದಕ್ಕೆ ನೆಹರೂ ಸಮಾಜವಾದ ಎನ್ನಬಹುದು ಎಂದರು.
ಸಂವಿಧಾನ ಆಶಯದಡಿಯೇ ಭೂಸುಧಾರಣೆ, ಜಮೀನ್ದಾರಿ ಪದ್ಧತಿ ನಿಷೇಧ, ಕಾರ್ಮಿಕ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳು ರಚನೆಯಾಗಿವೆ. ಇದು ಸಮಾಜದಲ್ಲಿ ಬಹಳಷ್ಟು ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆ ತಂದಿದೆ.
ಕಾನೂನು ವಿದ್ಯಾರ್ಥಿಗಳು ಸಮಾಜ ಪರಿವರ್ತನೆ ಕಾರಣವಾಗಿರುವ ಕಾನೂನುಗಳು, ಇದನ್ನು ರಚನೆ ಮಾಡಿರುವ ಶಾಸಕಾಂಗದ ಮಹತ್ವದ ಸಂಗತಿಗಳ ಕುರಿತು ಅಧ್ಯಯನ ಮಾಡಬೇಕು. ಜತೆಗೆ, ಸಂವಿಧಾನ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅದು ಸಮಾಜ ಅಭಿವೃದ್ಧಿಗೆ ಹೇಗೆ ಇನ್ನಷ್ಟು ಪೂರಕವಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಆಲೋಚಿಸಬೇಕು ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಸಂಯೋಜಕ ಆಶ್ರಯ್ ಎಸ್.ಚಕ್ರಬೊರ್ತಿ ಇದ್ದರು.