ತಿ.ನರಸೀಪುರ ತಾಲೂಕಿನ ಚಾಮನಹಳ್ಳಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೇಗಿಲಯೋಗಿ ಬನ್ನೂರು ಹೋಬಳಿ ಶಾಖೆ, ತಾಲೂಕು ಒಕ್ಕಲಿಗರ ಸಂಘದ ಉದ್ಘಾಟನೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ವೈ.ಎಸ್.ರಾಮಸ್ವಾಮಿ, ವೈ.ಎನ್.ಶಂಕರೇಗೌಡ, ಎಂ.ಬಿ.ಮಂಜೇಗೌಡ, ಟಿ.ಪಿ. ಸುಬ್ರಮಣ್ಯ, ಡಾ.ಬಿ.ಎನ್. ರವೀಶ್, ಡಾ.ಸದಾನಂದ ಇತರರು ಇದ್ದರು. 
ಮೈಸೂರು

ಒಕ್ಕಲಿಗರು ಸಂಘಟಿತರಾದರೆ ದೇಶದ ಅಭಿವೃದ್ಧಿ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಸ್ವಾಮಿ ವಿವೇಕಾನಂದರ ಪ್ರೇರಣೆ ಕಾರಣ
ತಿ.ನರಸೀಪುರ : ಕೆಡಕಿನ ಚಿಂತನೆ, ರಾಜಕೀಯ ವೈಷಮ್ಯಗಳನ್ನು ಬಿಟ್ಟು ರಾಜ್ಯದಲ್ಲಿರುವ ಒಕ್ಕಲಿಗರು ಸಂಘಟಿತರಾದರೆ ಸಮುದಾಯದ ಜತೆಗೆ ದೇಶದ ಅಭಿವೃದ್ಧಿಯೂ ಆಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಚಾಮನಹಳ್ಳಿಯ ಬಳಿ ತುರಗನೂರು ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮೈಸೂರು ಜಿಲ್ಲಾ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನೇಗಿಲಯೋಗಿ ಬನ್ನೂರು ಹೋಬಳಿ ಶಾಖೆ, ತಿ.ನರಸೀಪುರ ತಾಲೂಕು ಒಕ್ಕಲಿಗರ ಸಂಘದ ಉದ್ಘಾಟನೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
 ನೇಗಿಲಯೋಗಿ ಟ್ರಸ್ಟ್ ಅನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಆಚೆಗೂ ತೆಗೆದುಕೊಂಡು ಹೋಗುವ ಮಹತ್ವದ ಕೆಲಸ ಮಾಡಲಾಗಿದೆ. ಇಲ್ಲಿ ಕೇವಲ ಇದು ಒಕ್ಕಲಿಗ ಸಮಾಜದ ಸಂಘಟನೆ ಎಂದು ಬಿಂಬಿತವಾಗಬಹುದು. ಆದರೆ ಸಂಘಟನೆಯ ಉದ್ದೇಶ ಸ್ಪಷ್ಟವಾಗಿರಬೇಕು. ನಮ್ಮನ್ನು ನಾವು ಸರಿ ಮಾಡಿಕೊಳ್ಳುವ ಉದ್ದೇಶವಿರಬೇಕು, ಇಂತಹ ಸಂಸ್ಥೆಯ ಸದಸ್ಯರಾಗಲು, ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಚಿಕೆ ಯಾಕೆ ಪಡಬೇಕು. ನಮ್ಮ ಉದ್ದೇಶಗಳು ಎಲ್ಲಿ ಸ್ಪಷ್ಟವಾಗಿರುತ್ತವೆಯೋ ಅಲ್ಲಿ ನಾವು ತಲೆ ಎತ್ತಿ ಇಂತಹ ಸಮುದಾಯಕ್ಕೆ ಸೇರಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದರು.
ರಾಜ್ಯದಲ್ಲಿ ಈಗ ಪ್ರಬಲವಾಗಿ ಬೆಳೆದಿರುವ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬರಲು ಸ್ವಾಮಿ ವಿವೇಕಾನಂದರ ಪ್ರೇರಣೆಯೂ ಕಾರಣ. ಷಿಕಾಗೋ ಸರ್ವಧರ್ಮ ಸಮ್ಮೇಳನ ಮುಗಿಸಿಕೊಂಡು ಚೆನ್ನೈಗೆ ಬಂದು ಪ್ರವಚನ ನೀಡುತ್ತಿದ್ದ ಸ್ವಾಮಿ ವಿವೇಕಾನಂದರನ್ನು ಮುಖಂಡ ಕೆ.ಎಚ್.ರಾಮಯ್ಯ ಭೇಟಿ ಮಾಡಿ ಸಂದೇಶ ಕೇಳಿದರು. ಆಗ ವಿವೇಕಾನಂದರು ಇಡೀ ಸಮಾಜಕ್ಕೆ ಸೇವೆ ಮಾಡುವ ಬದಲು ನಿಮ್ಮ ಸಮುದಾಯಕ್ಕೆ ಏನನ್ನಾದರೂ ಮಾಡಿ ಎಂದು ಸಲಹೆ ನೀಡಿದ್ದರು. ಅದರಂತೆ ಬೆಂಗಳೂರಿಗೆ ಬಂದು ಕೇಂದ್ರ ಒಕ್ಕಲಿಗರ ಸಂಘ ಸ್ಥಾಪನೆಗೆ ಕೆ.ಎಚ್.ರಾಮಯ್ಯ ನಾಂದಿ ಹಾಡಿದರು. ಬಳಿಕ ಹಲವು ಸಂಘ, ಸಂಸ್ಥೆಗಳನ್ನು ಕಟ್ಟಿದರು ಎಂದು ಸ್ಮರಿಸಿದರು. 
ಸಮಾರಂಭದಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾಂತರಾಜು, ಪಶುವೈದ್ಯ ಡಾ.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಹೇಮಂತ್ ಕುಮಾರ್, ಬಯೋ ಮೆಡಿಕಲ್‌ನ ಬಿ.ಎನ್.ಸುರೇಶ್, ಕಲಾವಿದ ಸಿ.ಆರ್.ರಂಗಸ್ವಾಮಿ, ವಕೀಲ ಎಚ್. ಆರ್. ಸತೀಶ್, ಪೋಷಕ ನಟ ಬನ್ನೂರು ಶ್ರೀನಿವಾಸ್, ಕೃಷಿಕ ವೈ.ಎಸ್.ಸ್ವಾಮಿ, ಪ್ರಗತಿಪರ ರೈತ ಮಹಿಳೆ ಆರ್.ವಸಂತ, ಪ್ರಗತಿಪರ ರೈತ ಲಿಂಗಣ್ಣ, ಪ್ರಿಂಟರ್ಸ್ ಬಿ.ಪಿ. ಮಂಜುನಾಥ, ಶಿಲ್ಪಕಲೆ ಕಲಾವಿದ ಎಸ್. ಮಾದಪ್ಪ, ಇನ್ನಿತರ ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ತಲಕಾಡು ಗಂಗಾ ಸಾಮ್ರಟರ ಬಗ್ಗೆ ಮೈಸೂರು ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಮನೋವೈದ್ಯ ಡಾ.ಬಿ.ಎನ್. ರವೀಶ್ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ, ನೇಗಿಲಯೋಗಿ ಬನ್ನೂರು ಹೋಬಳಿಯ ಗೌರವಾಧ್ಯಕ್ಷ ವೈ.ಎಸ್.ರಾಮಸ್ವಾಮಿ ವಹಿಸಿದ್ದರು. 
ಮಾಜಿ ಶಾಸಕ ಎಸ್.ಕೃಷ್ಣಪ್ಪ, ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಸದಾನಂದ, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚಲುವರಾಜು, ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವೈ.ಎನ್.ಶಂಕರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಮೈಸೂರು ಜಿಲ್ಲಾಧ್ಯಕ್ಷ ಡಿ.ರವಿಕುಮಾರ್, ವಿವೇಕಾನಂದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ, ಒಕ್ಕಲಿಗ ಸಂಘದ ಸದಸ್ಯರು, ಸಮಾಜದ ಮುಖಂಡರು, ಯಜಮಾನರು ಇದ್ದರು.