ತಿ.ನರಸೀಪುರ ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರ ಸುವರ್ಣ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಸಾಲೂರು ಮಠದ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹೆಳವರಹುಂಡಿ ಸಿದ್ದಪ್ಪ, ಪುಟ್ಟಬುದ್ದಿ ಇತರರು ಇದ್ದರು. 
ಮೈಸೂರು

ಶಿಕ್ಷಣ, ಸಂಸ್ಕೃತಿ ಬೆಳವಣಿಗೆಗೆ ಮಠಗಳ ಕೊಡುಗೆ ಅಪಾರ

ತಿ.ನರಸೀಪುರ: ದಾಸೋಹದ ಜತೆಗೆ ಶಿಕ್ಷಣ, ನೆಲದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಸಮಾಜದ ಉನ್ನತೀಕರಣಕ್ಕೆ ಮಠ-ಮಾನ್ಯಗಳ ಸೇವಾ ಕಾರ್ಯಕ್ಕೆ ಶತಮಾನಗಳ ಹಿರಿಮೆ ಇದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಪಟ್ಟದ ಮಠದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಸುವರ್ಣ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನಾದ್ಯಂತ ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜದ ಉನ್ನತಿಗೆ ಸೇವಾ ಕಾರ್ಯಗಳನ್ನು ವೀರಶೈವ ಲಿಂಗಾಯತ ಮಠಗಳು ನೂರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ ಎಂದರು.
ಮೈಸೂರಿನಿಂದ ಬೀದರ್‌ತನಕ ಅನೇಕ ಮಠಗಳು ಅವುಗಳ ವ್ಯಾಪ್ತಿಯಲ್ಲಿ ಬಹಳ ದೊಡ್ಡ ಸೇವಾ ಕಾರ್ಯ ಮಾಡುತ್ತಿವೆ. ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಗೋಕಾಕ್‌ನ ಸಾವಳಗಿ ಮಠದಲ್ಲಿ ಅನ್ನದಾಸೋಹ ಸೇವೆ ಪಡೆದಂತಹವರು, ಶಿವರುದ್ರಪ್ಪ ಸೇರಿದಂತೆ ಅನೇಕರು ಚಿತ್ರದುರ್ಗದ ಮುರುಘಾ ಮಠ, ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಮೈಸೂರಿನ ಸುತ್ತೂರು ಮಠಗಳಲ್ಲಿ ಆಶ್ರಯ ಪಡೆದು ರಾಷ್ಟ್ರ ಕವಿಗಳಾದ ಉದಾಹರಣೆಗಳಿವೆ. ಈ ಮಠಗಳು ಯಾವುದೇ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದ್ದು, ಇಸ್ಲಾಂ ಧರ್ಮದವರೂ ಆಶ್ರಯ ಪಡೆಯಲು ಅವಕಾಶ ಮಾಡಿಕೊಟ್ಟಿವೆ. ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಮಠಗಳು ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ವಿದ್ವತ್ತನ್ನು ಸಂಪಾದನೆ ಮಾಡುವುದರ ಜತೆಗೆ ವೀರಶೈವ ಲಿಂಗಾಯತ ಧರ್ಮದ ತಾತ್ವಿಕ ಅಂಶಗಳ ಆಚರಣೆಯನ್ನು ಭಕ್ತಾದಿಗಳಿಗೆ ತಿಳಿಸುವಂತಹ ಸಾಮರ್ಥ್ಯ ಕೂಡ ಹೊಂದಿದ್ದರು. ಹಿರಿಯ ಶ್ರೀಗಳ ಪುಣ್ಯಸಂಸ್ಮರಣೆ ಜತೆಗೆ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮಾಡ್ರಹಳ್ಳಿ ಮಠದ ಜವಾಬ್ದಾರಿ ವಹಿಸಿಕೊಂಡು 50 ವರ್ಷಗಳಾಗಿವೆ. ಆದರೆ ಅವರ ಪಟ್ಟಾಧಿಕಾರದ 50 ವರ್ಷ ಆಚರಿಸುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಅವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವವನ್ನು ಗುರುಗಳ ಸಂಸ್ಮರಣೆ ಜತೆಗೆ ಸಮೀಕರಣಗೊಳಿಸುವ ಮೂಲಕ ಗುರುಗಳಿಗೆ ವಿಶೇಷವಾದ ಗೌರವ ಸಲ್ಲಿಸುತ್ತಿದ್ದಾರೆ ಎಂದು ಶಾಂತ ಮಲ್ಲಿಕಾರ್ಜುನಸ್ವಾಮಿ ಅವರ ಕಾರ್ಯ ಶ್ಲಾಘಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಡ್ರಹಳ್ಳಿ ಪಟ್ಟದ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ದೇವನೂರು ದಾಸೋಹ ಮಠದ ಶ್ರೀಮಹಾಂತ ಸ್ವಾಮೀಜಿ, ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಡಾ. ಶ್ರೀ ಚನ್ನಬಸವ ಸ್ವಾಮೀಜಿ, ಮಹದೇಶ್ವರಬೆಟ್ಟದ ಸಾಲೂರು ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀಶಿವಲಿಂಗೇಂದ್ರ ಸ್ವಾಮೀಜಿ, ಶ್ರೀಪರಶಿವಮೂರ್ತಿ ಸ್ವಾಮೀಜಿ, ಡಾಕ್ಟರ್ ಶರತ್‌ಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಖಿಲ ಭಾರತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಗ್ರಾಮ ವಿದ್ಯೋದಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ದೇವನೂರು ವಿಶ್ರಾಂತ ಪ್ರಾಧ್ಯಾಪಕ ಡಿ.ಎಸ್.ಸದಾಶಿವಮೂರ್ತಿ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅನಾಥ ಶವಗಳ ಮುಕ್ತಿದಾತ ಡಾ.ಎಂ.ಮಾದೇಶ್, ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.
ಶ್ರೀಸರ್ಪಭೂಷಣ ಸ್ವಾಮೀಜಿ, ಶ್ರೀನಂಜುಂಡ ಸ್ವಾಮೀಜಿ, ಶ್ರೀಷಡಕ್ಷರ ದೇಶೀಕೇಂದ್ರ ಸ್ವಾಮೀಜಿ, ಶ್ರೀಷಡಕ್ಷರ ಶಿವಾಚಾರ್ಯ ಸ್ವಾಮೀಜಿ, ಶ್ರೀಶ್ರೀಕಂಠ ಸ್ವಾಮೀಜಿ, ಶ್ರೀಶಿವಲಿಂಗ ಸ್ವಾಮೀಜಿ, ಶ್ರೀಶಿವಕುಮಾರ ಸ್ವಾಮೀಜಿ, ಶ್ರೀಶಿವಪ್ರಭು ಸ್ವಾಮೀಜಿ, ಶ್ರೀಮಹಾಲಿಂಗ ಸ್ವಾಮೀಜಿ, ನಿವೃತ್ತ ಮುಖ್ಯಶಿಕ್ಷಕ ಪುಟ್ಟಬುದ್ದಿ, ಬಜ್ಜಿ ನಿಂಗಪ್ಪ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಡೇರಿ ಅಧ್ಯಕ್ಷ ನಾಗೇಂದ್ರಪ್ಪ, ಬಸವ ಬಳಗದ ತಾಲೂಕು ಅಧ್ಯಕ್ಷ ಹಲವಾರ ಪರಮೇಶ್ ಪಟೇಲ್, ಗುತ್ತಿಗೆದಾರ ಬಿ. ಮಂಟೇಲಿಂಗಪ್ಪ, ನಿಲಸೋಗೆ ನಂಜುಂಡಸ್ವಾಮಿ, ಹೇಳವರಹುಂಡಿ ಪಿ.ನಟರಾಜು, ಹಿರಿಯೂರು ವೀರೇಂದ್ರ, ತೊಂಟೇಶ್ ಇತರರು ಇದ್ದರು.