ಕೆ.ಆರ್.ನಗರ ತಾಲೂಕಿನ ಬೋರೇಕಲ್ಲಹಳ್ಳಿ ಗ್ರಾಮದಲ್ಲಿ ಬಸವ ಮಠದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ಮಠಗಳ ಸ್ವಾಮೀಜಿಗಳನ್ನು ಶಾಸಕ ಡಿ.ರವಿಶಂಕರ್ ಗೌರವಿಸಿದರು. ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಸಾಲಿಗ್ರಾಮ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆಡಗನಟರಾಜು ಇನ್ನಿತರರು ಇದ್ದರು.
- ಶಾಸಕ ಡಿ.ರವಿಶಂಕರ್ ಮೆಚ್ಚುಗೆ
- ಬಸವ ಮಠ ಉದ್ಘಾಟನೆ
ಕೆ.ಆರ್.ನಗರ: ರಾಜ್ಯದ ಉದ್ದಗಲಕ್ಕೂ ಮಠಗಳನ್ನು ಸ್ಥಾಪಿಸಿ ಅವುಗಳ ಮೂಲಕ ಸಂಸ್ಕಾರ, ಶಿಕ್ಷಣ, ಆರೋಗ್ಯ ನೀಡುವ ನಿಟ್ಟಿನಲ್ಲಿ ಮಠಗಳ ಪಾತ್ರ ದೊಡ್ಡದು. ಸರ್ಕಾರಕ್ಕೆ ಪರ‌್ಯಾಯವಾಗಿ ಮಠಗಳು ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿವೆ. ಇದರಿಂದ ರಾಜ್ಯದ ಜನತೆಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಬೋರೇಕಲ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಬಸವ ಮಠದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಇತರ ಮಠಗಳ ರೀತಿಯಲ್ಲಿ ಈ ಮಠಗಳ ಮುಖೇನ ಶಿಕ್ಷಣ ಸಂಸ್ಥೆಗಳನ್ನು ತೆಗೆದುಕೊಂಡು ಶಿಕ್ಷಣ ನೀಡಿದರೆ ಅಂತಹ ಮಠಗಳು ಯಶಸ್ವಿಯಾಗಲಿವೆ ಎಂದರು.
ನಾರಾಯಣಪುರ, ಹೊಸೂರುಕಲ್ಲಹಳ್ಳಿ, ಸೌತನಹಳ್ಳಿ, ಕಾಮೇನಹಳ್ಳಿ ಮತ್ತು ಬೋರೇಕಲ್ಲಹಳ್ಳಿ ಗ್ರಾಮಸ್ಥರ ಸೂಚನೆಯಂತೆ ಮಠಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕ ಕೊಡಿಸಿದ್ದು ಮಠದ ನಿರ್ವಹಣೆಗಾಗಿ ವೈಯಕ್ತಿಕವಾಗಿ 5ಲಕ್ಷ ರೂಪಾಯಿಗಳನ್ನು ನೀಡುವುದರ ಜತೆಗೆ ಮಠದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ 20 ಲಕ್ಷ ರೂಪಾಯಿಗಳ ಅನುದಾನ ನೀಡುವೆ ಎಂದು ಭರವಸೆ ನೀಡಿದರು
ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ನಿವೇಶನದ ದಾಖಲಾತಿಗಳನ್ನು ಸರ್ಕಾರದ ಮಟ್ಟದಲ್ಲಿ ಸರಿಪಡಿಸಲಾಗುತ್ತಿದ್ದು ಮುಂದಿನ 2 ರಿಂದ 3 ತಿಂಗಳೊಳಗೆ ಮುಂದುವರಿದ ಕಾಮಗಾರಿಗೆ 1 ಕೋಟಿ ರೂಪಾಯಿ ಅನುದಾನ ನೀಡಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿಸಲಾಗುವುದು ಎಂದು ತಿಳಿಸಿದರು.
ಬೋರೇಕಲ್ಲಹಳ್ಳಿ ಬಸವ ಮಠದ ಶ್ರೀ ದೇವರಾಜ ಸ್ವಾಮೀಜಿ ಈ ಭಾಗದ ಜನರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡುವುದರ ಜತೆಗೆ ಮಠದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿದ ಶಾಸಕರು, ನಾನು ನಿಮ್ಮಲ್ಲೊಬ್ಬನಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್ ಮಾತನಾಡಿ, ಮಠಕ್ಕೆ ವೈಯಕ್ತಿವಾಗಿ ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದರು. ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಸಾಲಿಗ್ರಾಮ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆಡಗನಟರಾಜು ಮಾತನಾಡಿದರು.
ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ಶ್ರೀನಟರಾಜ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಲಾಳನಹಳ್ಳಿ ಮಠದ ಜಯದೇವಿ ತಾಯಿ, ಕಲ್ಯಾಣಪುರ ಮಠದ ಚಿನ್ಮಯಿ ತಾಯಿ, ಮಾರಗೌಡನಹಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ, ಮಠದ ಆಡಳಿತ ಮಂಡಳಿ ಅಧ್ಯಕ್ಷ ರುದ್ರಪ್ಪ ಇನ್ನಿತರರು ಹಾಜರಿದ್ದರು.