ಮಾಲಿಗೌಡನಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಿ.ರವಿಶಂಕರ್, ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ, ಗಣೇಶಪ್ರಸಾದ್, ದೊಡ್ಡಸ್ವಾಮೇಗೌಡ. ಡಿ.ಭಾರತಿ ಸೇರಿದಂತೆ ಇತರರು ಇದ್ದರು.
ಸಾಲಿಗ್ರಾಮ: ಶ್ರೀಮಲೈ ಮಹದೇಶ್ವರರು, ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವು ದರಿಂದ ಮನುಷ್ಯ ಮುಕ್ತಿ ಪಡೆಯಬಹುದು ಎಂದು ಸೂತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಮಹದೇಶ್ವರ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಗೋಪುರದ ಬ್ರಹ್ಮಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸೋಮವಾರ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಐದು ಶತಮಾನಗಳ ಹಿಂದೆ ಜನರಲ್ಲಿ ಸುಜ್ಞಾನ, ಸಂಸ್ಕಾರ ಮೂಡಿಸುವಂತಹ ಸತ್ಕಾರ್ಯ ಮಾಡಿದ ಕೀರ್ತಿ ಶ್ರೀಮಹದೇಶ್ವರರಿಗೆ ಸಲ್ಲಬೇಕು. ಮಲೆ ಮಹದೇಶ್ವರ ಎಂದರೆ ಬೆಟ್ಟದ ಮಾದಪ್ಪ ಎಂದೇ ಜನಜನಿತ. ಸರಳ ಬದುಕು ರೂಪಿಸಿಕೊಂಡಿದ್ದ ಮಾದಪ್ಪ ಪವಾಡಪುರುಷ ಎಂದು ಬಣ್ಣಿಸಿದರು.
300 ವರ್ಷಗಳ ಹಿಂದೆ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಚಿಕ್ಕದಾಗಿ ನಿರ್ಮಾಣವಾಗಿದ್ದ ಈ ದೇವಸ್ಥಾನವನ್ನು ಐಎಎಸ್ ಅಧಿಕಾರಿ, ಹಾಡ್ಯ ಗ್ರಾಮದ ಸೊಸೆ ಡಿ.ಭಾರತಿ ಮಹ ದೇವಪ್ಪ ಅವರು ಎಲ್ಲರ ಸಹಕಾರದಿಂದ ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.
ಶಾಸಕ ಡಿ. ರವಿಶಂಕರ್ ಮಾತನಾಡಿ, ಶತಮಾನಗಳಿಂದಲೂ ಅನ್ನ, ಅಕ್ಷರ ದಾಸೋಹದ ಮೂಲಕ ಹಲವಾರು ಮಠಗಳು ಮನುಕುಲಕ್ಕೆ ತಮ್ಮದೇ ಕೊಡುಗೆ ನೀಡಿ ಸರ್ಕಾರದ ಜತೆ ಕೈ ಜೋಡಿಸಿವೆ. ಮೈಸೂರು ಭಾಗದಲ್ಲಿ ಹತ್ತಾರು ಶಿಕ್ಷಣ ಕೇಂದ್ರಗಳನ್ನ ಅರಂಭಿಸಿ ಲಕ್ಷಾಂತರ ಮಂದಿಗೆ ಶಿಕ್ಷಣ ಕೊಟ್ಟ ಕೀರ್ತಿ ಸೂತ್ತೂರು ಮಠಕ್ಕೆ ಸಲ್ಲುತ್ತದೆ. ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳು ರಾಜ್ಯ, ದೇಶ, ವಿದೇಶದಲ್ಲಿ ಉದ್ಯೋಗ ದೊರೆಯಲು ಸೂತ್ತೂರು ಶ್ರೀಗಳ ದೂರ ದೃಷ್ಟಿಯೇ ಕಾರಣ ಎಂದು ಹೇಳಿದರು.
ದೇವಾಲಯದ ಕಳಸಾರೋಹಣವನ್ನು ಸಿದ್ಧಗಂಗಾ ಮಠದ ಶ್ರೀಗಳು ನೆರವೇರಿಸಿದರು. ಬೆಟ್ಟದಪುರದ ಸಲೀಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾವಡಗೆರೆ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ರಾವಂದೂರು ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ, ಈಶಾನೇಶ್ವರ ಮಠದ ಶ್ರೀ ಬಸವರಾಜ ಸ್ವಾಮೀಜಿ, ಬಸವ ಕಲ್ಯಾಣ ಮಠದ ಶ್ರೀ ವಿಜಯ ಕುಮಾರಸ್ವಾಮೀಜಿ, ಐಎಎಸ್ ಅಧಿಕಾರಿ ಡಿ.ಭಾರತಿ, ಮಾಜಿ ಸಚಿವ ಸಾ.ರಾ.ಮಹೇಶ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಇತರರಿದ್ದರು.