ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಸ್ವಾಮಿ ಮಹಮೇಧಾನಂದ, ಡಾ.ಡಿ.ತಿಮ್ಮಯ್ಯ, ಪ್ರೊ.ಮೊರಬದ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಸ್ವಾಮಿ, ಡಾ. ಸುದರ್ಶನ್ ಇತರರಿದ್ದರು.
ದೇವರ ದಾಸಿಮಯ್ಯ ಅವರು ಸಮಾಜಕ್ಕೆ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವ ಸಾರಿದ ಮಹಾನ್ ಶರಣರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ದಾಸಿಮಯ್ಯನವರು ಬಸವಣ್ಣನಿಗಿಂತ ಮೊದಲೇ ಅಂದರೆ ಹತ್ತನೇ ಶತಮಾನದಲ್ಲಿ ಶಿವಪುರ ಗ್ರಾಮದಲ್ಲಿ ಜನಿಸಿದರು. ಇವರು ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಒಂದು ಕಡೆ ದೈವಭಕ್ತಿ ಹಾಗೂ ಶ್ರದ್ಧೆಯಿದ್ದರೆ, ಮತ್ತೊಂದೆಡೆ ನೇಯ್ಗೆ ಮಾಡುವ ಕಾಯಕದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದರು.
ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅತ್ಯಂತ ವಿಶೇಷವಾದ ದೇಶ. ಇದಕ್ಕೆ ಕಾರಣ ಇಲ್ಲಿನ ಸುದೀರ್ಘ ಧಾರ್ಮಿಕ ಹಿನ್ನೆಲೆ ಮತ್ತು ವೈವಿಧ್ಯಮಯ ಸಂಸ್ಕೃತಿ. ಭಾರತದಲ್ಲಿ ವಿವಿಧ ಜಾತಿ, ಧರ್ಮಗಳಿದ್ದರೂ ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಭಾಷೆ ಅಥವಾ ಜನಾಂಗದ ಆಧಾರದ ಮೇಲೆ ನಾವು ವಿಭಜಿತರಾಗಿ ಕಂಡರೂ, ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಸಂಘಟಿತರಾಗಿದ್ದೇವೆ ಎಂಬುದು ವಿಶ್ವಕ್ಕೆ ನಾವು ನೀಡುವ ಸಂದೇಶವಾಗಿದೆ ಎಂದು ತಿಮ್ಮಯ್ಯ ತಿಳಿಸಿದರು.
ಸಮಾಜ ನಿರ್ಮಾಣದಲ್ಲಿ ನೇಕಾರ, ಕುಂಬಾರ ಹಾಗೂ ಚಮ್ಮಾರರಂತಹ ಕಾಯಕ ವರ್ಗಗಳ ಪಾತ್ರ ದೊಡ್ಡದು. ಕಾಯಕ ಶರಣರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಬದುಕದೆ, ಸಮಾಜದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸಿದ್ದಾರೆ. ಇಂದು ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ, ಅದರಲ್ಲಿ ಈ ಶರಣರ ತತ್ವಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಮ್ಮಯ್ಯ ಹೇಳಿದರು.
ಜೆಎಸ್‌ಎಸ್ ಪ್ರಸಾರಾಂಗದ ಮುಖ್ಯಸ್ಥ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇತಿಹಾಸದಲ್ಲಿ ದೇವರ ದಾಸಿಮಯ್ಯ ಬಟ್ಟೆ ನೇಯುವ, ಶಂಕರ ದಾಸಿಮಯ್ಯ ಬಣ್ಣ ಹಾಕುವ ಮತ್ತು ಶಿವ ದಾಸಿಮಯ್ಯ ಅವರು ಬಟ್ಟೆ ಹೊಲಿಯುವ ವೃತ್ತಿಯಲ್ಲಿ ತೊಡಗಿದ್ದರು. ದೇವರ ದಾಸಿಮಯ್ಯ ಅವರನ್ನು ಚಾಲುಕ್ಯ ದೊರೆ ಜಯಸಿಂಹನ ಮಹಾರಾಣಿ ಸುಗ್ಗಲಾದೇವಿಗೆ ಶಿವನ ಅನುಗ್ರಹವನ್ನು ಮಾಡಿಸಿದ ಗುರು ಎಂದರು.
ಪ್ರತಿಯೊಬ್ಬ ವಚನಕಾರರು ಹಾಗೂ ಶರಣರು ಯಾವುದಾದರೂ ನಿರ್ದಿಷ್ಟವಾದ ಕಾಯಕಕ್ಕೆ ಸೇರಿದವರಾಗಿದ್ದು, ಆ ಕಾಯಕದ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡು ಶಿವನ ಅಥವಾ ದೇವರ ಬಗೆಗಿನ ತಮ್ಮ ಭಕ್ತಿ ಭಾವವನ್ನು ವಚನಗಳ ಮೂಲಕ ವ್ಯಕ್ತಪಡಿಸುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ದೇವರ ದಾಸಿಮಯ್ಯ ಅಪೂರ್ವವಾದಂತಹ ಕಾಯಕ ಜೀವಿ. ತಮ್ಮ ನೇಯ್ಗೆಯನ್ನು ಕಾಯಕವನ್ನು ವೃತ್ತಿಯಾಗಿ ಸ್ವೀಕರಿಸುವ ಪ್ರಬುದ್ಧತೆಯನ್ನು ಸಾಧಿಸಿದವರು. ಸಾಕ್ಷಾತ್ ಶಿವನಿಗೇ ದಾಸಿಮಯ್ಯನವರು ವಸ್ತ್ರದಾನ
ಮಾಡಿದರು ಎಂಬ ದಂತಕಥೆ ಇದೆ ಎಂದರು.
ಶಿವ ಮೆಚ್ಚುವಂತೆ ಇರಬೇಕು: ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ಮಹಮೇಧಾನಂದ ಮಾತನಾಡಿ, ನಾವು ಮಾಡುವ ಕಾಯಕ ಯಾವಾಗಲೂ ಶಿವನು ಮೆಚ್ಚುವಂತಿರಬೇಕು. ಕೇವಲ ಸುಂದರವಾದ ಬಟ್ಟೆ ಧರಿಸುವುದರಿಂದ ಮಾನ ಉಳಿಯುವುದಿಲ್ಲ, ನಮ್ಮ ಚಾರಿತ್ರ್ಯದಿಂದ ಅದು ಸಾಧ್ಯ. ಆಂತರ್ಯದ ಶುದ್ಧಿಯಿಲ್ಲದ ಬಾಹ್ಯ ಅಲಂಕಾರ ವ್ಯರ್ಥ. ಸತ್ಯ ಪರಿಪಾಲನೆ ಮತ್ತು ಕುಶಲತೆಯಿಂದ ಕೆಲಸ ಮಾಡಿದಾಗ ಮಾತ್ರ ದೈವಾನುಗ್ರಹ ಲಭಿಸುತ್ತದೆ. ಶರಣರ ವಚನಗಳನ್ನು ಓದಿದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಸುದರ್ಶನ್, ಮುಖಂಡರಾದ ಬಿ.ಎಸ್.ಸೋಮಶೇಖರ್, ಎಚ್.ವಿ.ರಾಜೀವ್, ಎಂ.ಡಿ.ಲಕ್ಷ್ಮೀನಾರಾಯಣ, ಆರ್.ಮೂರ್ತಿ, ಮಂಜುಳಾ, ಎಸ್.ದಿನೇಶ್ ಯಜಮಾನ್, ಸುಬ್ರಹ್ಮಣ್ಯ ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಕಲಾತಂಡಗಳ ಮೆರವಣಿಗೆ ನಡೆಯಿತು.