ಹೃದ್ರೋಗ ತಜ್ಞ ಡಾ.ಜೆ.ಗೋಪಾಲ್ 
ಮೈಸೂರು

ವೈದ್ಯರು ಮತ್ತು ಇಂಜಿನಿಯರ್‌ಗಳ ಕೊಡುಗೆ ದೊಡ್ಡದು

ಪ್ರಮುಖ ಮುಖ್ಯಾಂಶಗಳು

  • ಹೃದ್ರೋಗ ತಜ್ಞ ಡಾ.ಜೆ.ಗೋಪಾಲ್ ಅಭಿಮತ

ಮೈಸೂರು: 

ಸಮಾಜದಲ್ಲಿ ವೈದ್ಯರು ಮತ್ತು ಇಂಜಿನಿಯರ್‌ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು 

ಹೃದ್ರೋಗ ತಜ್ಞ ಡಾ.ಜೆ.ಗೋಪಾಲ್ ಹೇಳಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಉಪನ್ಯಾಸದಲ್ಲಿ ಹೃದ್ರೋಗದ ಕುರಿತು ಅವರು ಉಪನ್ಯಾಸ ನೀಡಿದರು.
ಎರಡೂ ಕ್ಷೇತ್ರದ ಸಾಧಕರ ಕೊಡುಗೆಗಳಿಂದ ಸಮಾಜಕ್ಕೆ ಉತ್ತಮ ಲಾಭ ದೊರೆಯುತ್ತಿದೆ ಎಂದರು. ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
 ಆಧುನಿಕ ವೈದ್ಯಕೀಯ ಸೇವೆಗಳು ಇಂಜಿನಿಯರಿಂಗ್ ತಂತ್ರಜ್ಞಾನಗಳ ಸಹಾಯದಿಂದ ಹೊಸ ಹೊಸ ಮೈಲಿಗಲ್ಲುಗಳಿಗೆ ಪ್ರೇರಕವಾಗಿವೆ ಎಂದರು. 
ವೈದ್ಯರು ರೋಗಿಗಳ ಆರೋಗ್ಯವನ್ನು ಕಾಪಾಡಲು ಚಿಕಿತ್ಸೆಯನ್ನು ನೀಡಿದರೆ, ಇಂಜಿನಿಯರ್‌ಗಳು ಆ ಚಿಕಿತ್ಸೆಗೆ ಅಗತ್ಯವಾದ ತಂತ್ರಜ್ಞಾನ, ಉಪಕರಣಗಳು ಮತ್ತು ಸಾಧನಗಳನ್ನು  
ಅಭಿವೃದ್ಧಿ ಪಡಿಸುತ್ತಾರೆ. ಹೀಗಾಗಿ, ಆಧುನಿಕ ವೈದ್ಯಕೀಯ ಕ್ಷೇತ್ರದ ಯಶಸ್ಸಿನಲ್ಲಿ ಇಂಜಿನಿಯರ್‌ಗಳ ಕೊಡುಗೆಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವೈದ್ಯಕೀಯ ಉಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ (ಎಕ್ಸ್-ರೇ, ಎಂಆರ್‌ಐ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್ ಯಂತ್ರಗಳು), ಕೃತಕ ಅಂಗಗಳು , ಹೃದಯ ಪೇಸ್‌ಮೇಕರ್‌ಗಳಂತಹ ಸಾಧನಗಳ ನಿರ್ಮಾಣ, ಆಸ್ಪತ್ರೆಗಳಲ್ಲಿ ಬಳಸುವ ಸಾಫ್ಟ್‌ವೇರ್‌ಗಳು, ಡಿಜಿಟಲ್ ಆರೋಗ್ಯ ನಿರ್ವಹಣಾ ವ್ಯವಸ್ಥೆಗಳ ಅಭಿವೃದ್ಧಿ, ರೋಬೋಟಿಕ್ ಶಸ್ತ್ರ ಚಿಕಿತ್ಸಾ ತಂತ್ರಜ್ಞಾನಗಳ ಅಭಿವೃದ್ಧಿಯು ಇಂಜಿನಿಯರಿಂಗ್ ಕ್ಷೇತ್ರದ 
ಸಹಕಾರದಿಂದ ಆಗಿದೆ ಎಂದರು. 
ವೈದ್ಯಕೀಯ ರಂಗದಲ್ಲಿ ಟೆಲಿಮೆಡಿಸಿನ್ ಮತ್ತು ದೂರ ಚಿಕಿತ್ಸಾ ಸೇವೆಗಳು ಸಾಕಷ್ಟು  ಸುಧಾರಿಸಿವೆ. 
ವೈದ್ಯಕೀಯ ಉಪಕರಣಗಳ ನಿರ್ವಹಣೆಗೆ ಆರೋಗ್ಯ ರಂಗದ ತಜ್ಞರು ಕಾಳಜಿ ವಹಿಸಿದ್ದಾರೆ
ಎಂದರು. 
ಇಂಜಿನಿಯರ್‌ಗಳ ಅನ್ವೇಷಣೆಗಳಿಂದ ಅನೇಕ ಸಮಸ್ಯೆಗಳಿಗೆ ಅಚ್ಚರಿಯ ರೀತಿಯಲ್ಲಿ ಪರಿಹಾರ ಲಭ್ಯವಾಗುತ್ತಿವೆ ಎಂದು ಡಾ.ಜೆ.ಗೋಪಾಲ್ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಸುರೇಶ್‌ಬಾಬು, ಕಾರ್ಯದರ್ಶಿ ಎಂ.ಕೆ.ನಂಜಯ್ಯ ಇನ್ನಿತರರಿದ್ದರು.