ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮ 
ಮೈಸೂರು

ಮೈಸೂರು ವಿಶ್ವವಿದ್ಯಾಲಯದ ಬೀಮ್ಸ್ ಕೊಡುಗೆ ದೊಡ್ಡದು

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಶ್ಲಾಘನೆ
  • ಮೈಸೂರು ವಿಶ್ವವಿದ್ಯಾಲಯದ ಬಿ.ಎನ್.ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆ ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಬಿ.ಎನ್.ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆ(ಬಿಮ್ಸ್) ಉದ್ಯಮ ಕ್ಷೇತ್ರ ಮತ್ತು ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದು, ಅನೇಕ ನಾಯಕರು, ಚಿಂತಕರ ಸೃಷ್ಟಿಗೂ ಕಾರಣವಾಗಿದೆ ಎಂದು ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಮ್ಸ್‌ನ ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶತಮಾನದಷ್ಟ ಚರಿತ್ರೆ ಹೊಂದಿರುವ ಮೈಸೂರು ವಿವಿಯ ಪ್ರಮುಖ ಅಧ್ಯಯನ ಸಂಸ್ಥೆಯಾದ ಬಿಮ್ಸ್‌ ಅರ್ಧ ಶತಮಾನ ಕಂಡಿದೆ. 1974ರಲ್ಲಿ ಸ್ಥಾಪನೆಯಾದ ಇದು ಸಾವಿರಾರು ಸಂಪನ್ಮೂಲ ವ್ಯಕ್ತಿಗಳನ್ನು ಕೊಡುಗೆ ನೀಡಿದೆ. ದೂರದರ್ಶಿತ್ವ ಹಾಗೂ ಶ್ರೇಷ್ಠತೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇದು ನಿರ್ವಹಣಾ ವಿಜ್ಞಾನ ಕ್ಷೇತ್ರದ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುತ್ತಾ ಬಂದಿದೆ ಎಂದು ಹೇಳಿದರು.
ಸುವರ್ಣ ಮಹೋತ್ಸವವು ಒಂದು ಆಚರಣೆಯಷ್ಟೇ ಅಲ್ಲದೆ ಆತ್ಮಾವಲೋಕನ ಘಳಿಗೆಯೂ ಹೌದು. ಈ ಸಂಸ್ಥೆಯನ್ನು ಕಟ್ಟಿದ ದೂರದೃಷ್ಟಿಯ ನಾಯಕರು, ಸಮರ್ಪಿತ ಅಧ್ಯಾಪಕರು ಮತ್ತು  ಸಿಬ್ಬಂದಿಯ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು
ಸನ್ಮಾನಕ್ಕೆ ಪಾತ್ರವಾಗಿರುವ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ನಾಲ್ಕು ದಶಕಗಳಿಂದ ಕರ್ತವ್ಯ ಸಲ್ಲಿಸುತ್ತಾ ಬಂದಿದ್ದು, ಸಂಸ್ಥೆಯ ಏಳಿಗೆಯಲ್ಲಿ ಅವಿಭಾಜ್ಯ ಅಂಗವಾಗಿದ್ದಾರೆ. ಬುದ್ಧಿವಂತಿಕೆ, ಶಿಸ್ತು, ಅಚಲ ಬದ್ಧತೆಯಿಂದ ಹೊಂದಿರುವ ಅವರಿಂದ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊರೆತಿದೆ. ಆತ್ಮವಿಶ್ವಾಸದಿಂದ ಅನೇಕರು ವೃತ್ತಿಪರರಾಗಿ ಹೊರಹೊಮ್ಮಿದ್ದಾರೆ ಎಂದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿ, ಬ್ರಿಗೇಡ್ ಗ್ರೂಪ್ ಸಂಸ್ಥಾಪಕ ಎಂ.ಆರ್.ಜಯಶಂಕರ್ ಮಾತನಾಡಿ, ಬೀಮ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿ ನಾನು. ರೈತ ಕುಟುಂಬದಿಂದ ಬಂದ ನಾನು ಈ ವಿಭಾಗಕ್ಕೆ ಕಾರ್ಪೋರೇಟ್ ಕೋಟಾದಲ್ಲಿ ದಾಖಲಾಗಿದ್ದೆ. ವಿದ್ಯಾರ್ಥಿದೆಸೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ, ಕ್ಯಾಂಟೀನ್, ಹಾಸ್ಟೆಲ್ ಸೇರಿದಂತೆ ವಿವಿಧೆಡೆ ಓಡಾಡಿದ ನೆನಪು, ಸಹಪಾಠಿ, ಪ್ರಾಧ್ಯಾಪಕರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ನಿವೃತ್ತರಾಗಲಿರುವ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಪ್ರೊಎನ್.ನಾಗರಾಜ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಜ್, ಬೀಮ್ಸ್ ಹಣಕಾಸು ಅಧಿಕಾರಿ ಪ್ರೊ.ಎಸ್.ಜೆ.ಮಂಜುನಾಥ್, ಮುಖ್ಯಸ್ಥ ಪ್ರೊ.ಆರ್.ಮಹೇಶ್, ಪ್ರೊ.ಎಂ.ಅಮೂಲ್ಯ, ಪ್ರಧಾನ ಕಾರ್ಯದರ್ಶಿ ಸುಭಾಷ್ ಇನ್ನಿತರರು ಉಪಸ್ಥಿತರಿದ್ದರು.