ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಜೆ.ಸೋಮಶೇಖರ್ ಉದ್ಘಾಟಿಸಿದರು. ಸಿ.ಶಿವಕುಮಾರ್. ಎಚ್.ಎಸ್.ಗಿರಿಜಾಂಬ, ಡಾ.ಕೆ.ವಿ.ಕೃಷ್ಣಮೂರ್ತಿ, ಡಾ. ಮೋಹನ್‌ಕುಮಾರ್, ಡಾ.ಕಲಾವತಿ, ಬಿ.ಆರ್.ಭವ್ಯಾ, ಎಂ.ವಿ.ನಾಗರತ್ನಾ ಇತರರು ಇದ್ದರು. 
ಮೈಸೂರು

ಆದಿವಾಸಿಗಳನ್ನು ನಾಡಿನ ಬದುಕಿಗೆ ಒಗ್ಗಿಸುವುದೇ ಸವಾಲು: ಪ್ರೊ.ಜೆ.ಸೋಮಶೇಖರ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಬುಡಕಟ್ಟು ಜನರು ಕಾಡಿನ ಸಂಪತ್ತನ್ನು ರಕ್ಷಣೆ ಮಾಡುತ್ತಿದ್ದಾರೆ
  • ಅಭಿವೃದ್ಧಿಯ ಹೆಸರಿನಲ್ಲಿ ಅವರನ್ನು ಪೈಪೋಟಿಯಿಂದ ಒಕ್ಕಲೆಬ್ಬಿಸುತ್ತಿರುವುದೇ ಕಷ್ಟ
ಮೈಸೂರು:ಕಾಡಿನ ಬದುಕಿಗೆ ಒಗ್ಗಿರುವ ಆದಿವಾಸಿಗಳನ್ನು ನಾಡಿನ ಬದುಕಿಗೆ ಒಗ್ಗಿಸುವುದೇ ದೊಡ್ಡ ಸವಾಲಾಗಿದೆ ಎಂದು ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬುಡಕಟಟು ಸಮುದಾಯದ ಸಮಸ್ಯೆಗಳ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
ಬುಡಕಟ್ಟು ಜನರು ಕಾಡಿನ ಸಂಪತ್ತನ್ನು ರಕ್ಷಣೆ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಬುಡಕಟ್ಟು ಜನರಿಗೆ ವಿಶೇಷ ಯೋಜನೆ ರೂಪಿಸಲು ಅವಕಾಶಕೊಟ್ಟಿದೆ. ಆದರೆ ಕಾಡಿನ ಬದುಕಿಗೆ ಒಗ್ಗಿರುವವರನ್ನು ನಾಡಿನ ಬದುಕಿಗೆ ಒಗ್ಗಿಸುವುದೇ ದೊಡ್ಡ ಸವಾಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವರನ್ನು ಪೈಪೋಟಿಯಿಂದ ಒಕ್ಕಲೆಬ್ಬಿಸುತ್ತಿರುವುದೇ ಕಷ್ಟ ಎಂದರು.
ಬುಡಕಟ್ಟು ಜನರನ್ನು ಕಾಡಿನಿಂದ ನಾಡಿಗೆ ಹೊರಹಾಕಿದಾಗ ಅವರು, ಅನುಭವಿಸುವ ತೊಂದರೆಗಳು ಹಾಗೂ ಕಾಡಿನ ಮಕ್ಕಳಿಗೂ ನಾಡಿನ ಮಕ್ಕಳಿಗೂ ಇರುವ ವ್ಯತ್ಯಾಸವನ್ನು ನೋಡಬೇಕಾಗಿದೆ. ಆದ್ದರಿಂದ ಸರ್ಕಾರದ ಪಾಲಿಸಿಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷವಾಗಿ ಅನುಕೂಲವಾಗುವಂತೆ ಶಿಕ್ಷಣ, ಆರೋಗ್ಯ, ಆರ್ಥಿಕವಾಗಿ ಸಬಲರಾಗಲು ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಸಿ.ಶಿವಕುಮಾರ್ ಮಾತನಾಡಿ, ನಾವು ಮೊದಲು ಸಂವಿಧಾನವನ್ನು ಅರ್ಥ ಮಾಡಿಕೊಂಡು ಬುಡಕಟ್ಟು ಜನರಿಗೆ ವಸತಿ, ಉದ್ಯೋಗ, ಶಿಕ್ಷಣಗಳು ಮೂಲಭೂತ ಹಕ್ಕಾಗಬೇಕು. 50 ಬುಡಕಟ್ಟು ಸಮುದಾಯಗಳನ್ನು ಆದ್ಯತೆ ಮೇಲೆ ಅಭಿವೃದ್ಧಿಪಡಿಸಬೇಕು. ಅಧಿಕಾರದಲ್ಲಿರುವವರು ಕಟ್ಟಕಡೆಯ ಬುಡಕಟ್ಟು ಸಮುದಾಯವನ್ನು ಮೇಲೆತ್ತಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಎಚ್.ಎಸ್. ಗಿರಿಜಾಂಬ ಮಾತನಾಡಿ, ಬುಡಕಟ್ಟು ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ವಿಸ್ತೃತವಾಗಿ ಚರ್ಚೆಯಾಗಬೇಕು. ಪ್ರಬಂಧ ಮಂಡಿಸುವವರು ಬುಡಕಟ್ಟು ಜನರೊಂದಿಗೆ ನೇರವಾಗಿ ಚರ್ಚಿಸಿರುವ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.
ವಿಚಾರಸಂಕಿರಣದಲ್ಲಿ ಡಾ.ಕೆ.ವಿ.ಕೃಷ್ಣಮೂರ್ತಿ, ಡಾ.ಮೋಹನ್‌ಕುಮಾರ್, ಡಾ.ಕಲಾವತಿ, ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ಅಧೀಕ್ಷಕಿ ಎಂ.ವಿ.ನಾಗರತ್ನಾ, ಕೆ.ರಮೇಶ್, ಡಾ.ರವಿಕುಮಾರ್, ಡಾ.ಎಸ್.ಎಂ.ಮುತ್ತಯ್ಯ, ಎಂ.ಸಿ.ವೇಣುಕಾಂತ, ಭರತ್‌ಕುಮಾರ್, ಎಂ.ಮನೋಜ್, ಆರ್.ಮಮತಾ, ಪುಷ್ಪಲತಾ, ಮನೋಜ್‌ಕುಮಾರ್, ಸಿದ್ದರಾಜು ಇತರರಿದ್ದರು.