ತಿ.ನರಸೀಪುರ ಪಟ್ಟಣದಲ್ಲಿ ಗುರುವಾರ ಇತಿಹಾಸ ಪ್ರಸಿದ್ಧ ಶ್ರೀಗುಂಜಾ ನರಸಿಂಹ ಸ್ವಾಮಿಯವರ ದಿವ್ಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಿ.ನರಸೀಪುರ: ದಕ್ಷಿಣ ಪ್ರಯಾಗ ಖ್ಯಾತಿಯ ಪಟ್ಟಣದಲ್ಲಿ ಗುರುವಾರ ಇತಿಹಾಸ ಪ್ರಸಿದ್ಧ ಶ್ರೀ ಗುಂಜಾ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಧೂಪದ ಘಮಲು, ಡೋಲು ನಗಾರಿಗಳ ಬೋರ್ಗರೆತ, ಭಕ್ತ ಸಾಗರದ ಹರ್ಷೋದ್ಗಾರಗಳ ನಡುವೆ ಶ್ರೀಮಹಾಲಕ್ಷ್ಮೀ ಸಮೇತ ತೇರನ್ನು ಏರಿ ಬಂದ ಶ್ರೀಗುಂಜಾ ನರಸಿಂಹ ಸ್ವಾಮಿಯವರ ವೈಭವನ್ನು ಕಣ್ತುಂಬಿಕೊಂಡ ಲಕ್ಷಾಂತರ ಜನರು ಹಣ್ಣು ದವನ ಎಸೆದು ನಮೋ ನಮೋ ನರಸಿಂಹ ನಮ್ಮನ್ನು ಹರಸೆಂದು ಕೈ ಮುಗಿದು ಪ್ರಾರ್ಥಿಸಿದರು.
ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಮಂಟಪೋತ್ಸವ ನೆರವೇರಿತು. ಮಂಗಳವಾದ್ಯದೊಡನೆ ಪಟ್ಟಣ ಸೇರಿದಂತೆ ಗೋಪಾಲಪುರ, ಆಲಗೂಡು ಹಾಗೂ ವ್ಯಾಸರಾಜಪುದಿಂದ ಆಗಮಿಸಿದ ಯಜಮಾನರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡರು. ಉತ್ಸವ ಮೂರ್ತಿಯನ್ನು ತೇರಿನ ಸುತ್ತ ಹಲವು ಸುತ್ತು ಪ್ರದಕ್ಷಿಣೆ ಹಾಕಿ, ಅಲಂಕಾರಗೊಂಡಿದ್ದ ರಥದಲ್ಲಿ ಪೀಠಾರೋಹಣ ಮಾಡಲಾಯಿತು. ಚೈತ್ರ ಮಾಸ ಶುಕ್ಲ ಪಕ್ಷ ಹುಣ್ಣಿಮೆ ದಿವಸ ಮಧ್ಯಾಹ್ನ 12.55 ರಿಂದ 1.35ರ ಶುಭ ಮಿಥುನ ಲಗ್ನದಲ್ಲಿ ದಿವ್ಯ ಬ್ರಹ್ಮರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮೊದಲ ಮಹಾ ಮಂಗಳಾರತಿಯನ್ನು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಸ್ವೀಕರಿಸಿದರು. ಬಿಸಿಯಾದ ನೆಲ, ನೆತ್ತಿ ಸುಡುವ ಬಿಸಿಲು ಎರಡನ್ನೂ ಲೆಕ್ಕಿಸದೆ ಜನತೆ ಭಕ್ತಿ ಭಾವದಿಂದ ರಥ ಎಳೆದರು. ಹೋಳಿಯ ಸಂಭ್ರಮದಲ್ಲಿ ಮಿಂದೆಂದಿದ್ದ ಯುವಕರು ರಥೋತ್ಸವಕ್ಕೆ ರಂಗನ್ನು ತಂದಿದ್ದರು. ತೇರಿನ ಬೀದಿಯ ಮಾರ್ಗವಾಗಿ ಪಶ್ಚಿಮ ದಿಕ್ಕಿಗೆ ತಿರುಗಿ ಚಿಕ್ಕ ಅಂಗಡಿ ಬೀದಿಗೆ ಸಾಗುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೆ ದೇವರ ದರ್ಶನಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಬರಲಾರಂಭಿಸಿದ್ದರಿಂದ ದೇವಾಲಯದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿತ್ತು, ಮೂಲ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ದೇವಾಲಯ ಬಲ ಭಾಗದಲ್ಲಿ ದಾಸೋಹ ಭವನ ಹಾಗೂ ಪಕ್ಕದಲ್ಲಿ ಶ್ರೀವಜ್ರಮಲೆ ಮಹದೇಶ್ವರ ಸೇವಾ ಬಳಗದ ವತಿಯಿಂದ ದಾಸೋಹವನ್ನು ಏರ್ಪಡಿಸಲಾಗಿತ್ತು. ದೇವಾಲಯ ಸುತ್ತಮುತ್ತ ಸೇರಿದಂತೆ ಚಿಕ್ಕ ಅಂಗಡಿ ಬೀದಿ, ಮಾರುಕಟ್ಟೆ ರಸ್ತೆ, ಹಳೇ ಸಂತೇಮಾಳ, ಲಿಂಕ್ ರಸ್ತೆ ಹಾಗೂ ಕಾಲೇಜು ರಸ್ತೆಯಲ್ಲಿ ಹರಕೆ ಹೊತ್ತಿದ್ದವರು, ವರ್ತಕರು, ಸರಕು ಸಾಗಣೆವಾಹನಗಳ ಮಾಲೀಕರು ಹಾಗೂ ಚಾಲಕರು ಪಾನಕ, ಮಜ್ಜಿಗೆ, ಹೆಸರು ಬೇಳೆ, ಕೋಸಂಬರಿ, ಬಾತು ಹಾಗೂ ಮೊಸರನ್ನ ವಿತರಿಸಿದರು.
ದೇವಾಲಯದ ಅರ್ಚಕರ ತಂಡದಿಂದ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಧಾರ್ಮಿಕ ದತ್ತಿ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿತ್ತು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಟ್ಟಣ ಸೇರಿದಂತೆ ಗೋಪಾಲಪುರ, ಆಲಗೂಡು, ವ್ಯಾಸರಾಜಪುರ ಹಾಗೂ ಇನ್ನು ಹಲವು ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.