‘ಹಾಸ್ಯ ಸ್ವರ ಸಂಜೆ’ ಕಾರ್ಯಕ್ರಮ
- ಮನಿಮಿತ್ರ ಚಿಟ್ ಫಂಡ್, ವಿಜಯವಾಣಿ ಸಹಯೋಗದಲ್ಲಿ ಕಾರ್ಯಕ್ರಮ
- ಕಲಾವಿದರ ಮೋಡಿಗೆ ತಲೆದೂಗಿದ ನೂರಾರು ಜನ
ಮೈಸೂರು: ವರ್ಣರಂಜಿತ ವೇದಿಕೆಯಲ್ಲಿ ಅನುಸಂದಾನಗೊಂಡ ‘ಹಾಸ್ಯ ಮತ್ತು ಸ್ವರ’ ಏಕಕಾಲದಲ್ಲೇ ಸಭಿಕರಲ್ಲಿ ಮನರಂಜನೆಯ ರಸದೌತಣವನ್ನೇ ಉಣಬಡಿಸಿತು.
ಮನಿಮಿತ್ರ ಚಿಟ್ ಫಂಡ್ ವತಿಯಿಂದ ‘ವಿಜಯವಾಣಿ’ಯ ಮಾಧ್ಯಮ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಹಾಸ್ಯ ಸ್ವರ ಸಂಜೆ’ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು.
ನಗೆ ಮತ್ತು ನಿನಾದ ಸಮ್ಮಿಲನಕ್ಕೆ ನೂರಾರು ಪ್ರೇಕ್ಷಕರು ಸಾಕ್ಷಿಯಾದರು. ಒಮ್ಮೆ ಹಾಸ್ಯದ ಮೋಜು, ಇನ್ನೊಮ್ಮೆ ಸಂಗೀತದ ಮಧುರ ಸ್ವರಗಳು ಝೇಂಕರಿಸಿದವು. ಇದು ನೆರೆದವರಿಗೆ ಉಲ್ಲಾಸದೊಂದಿಗೆ ಮುದವನ್ನೂ ನೀಡಿತು.
ಗಾಯಕರು ಹಾಗೂ ಹಾಸ್ಯ ಕಲಾವಿದರು ನಿರಂತರ ನಾಲ್ಕು ಗಂಟೆಗಳ ಕಾಲ ಭರಪೂರ ರಂಜನೆಯನ್ನು ನೀಡಿದರು. ಗಾಯನದ ನಡುವೆ ಹಾಸ್ಯ ಕಲಾವಿದರು ವಿನೋದದ ಹೊನಲು ಹರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಮೊದಲಿಗೆ ಗೀತಗಾಯನ ಹೊರಹೊಮ್ಮಿತು. ಗಾಯಕರಾದ ಜಸ್ಕರನ್ ಸಿಂಗ್, ದರ್ಶನ್, ನಾದಿರಬಾನು, ರಶ್ಮಿ ವಿವಿಧ ಗೀತೆಗಳ ಮೂಲಕ ಮೋಡಿ ಮಾಡಿದರು. ‘ಸೋಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ...! ಗೀತೆ ರಿಂಗಣಿಸಿತು. ಕಿರಿಕ್ ಪಾರ್ಟಿ ಸಿನಿಮಾದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ...’ ಜನಪ್ರಿಯ ಗೀತೆಗೆ ಯಶವಂತ ಸೊಗಸಾಗಿ ಹಾಡಿ ಪ್ರೇಕ್ಷಕರ ಹೃದಯಕ್ಕೆ ಕಚಗುಳಿ ಇಟ್ಟರು.
ಬಿರುಗಾಳಿ ಸಿನಿಮಾದ ಮತ್ತೊಂದು ಲೋಕಪ್ರಿಯವಾಗಿರುವ ‘ಹೂವಿನ ಬಾಣದಂತೆ ಯಾರಿಗೂ ಕಾಣದಂತೆ’ ಹಾಡಿಗೆ ಗಾಯಕಿ ರಶ್ಮಿ ಧ್ವನಿಯಾದರು. 2022ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಲವ್ 360’ನ ‘ಜಗವೇ ನೀನು ಗೆಳತಿಯೇ...’ ಹಾಡಿಗೆ ಗಾಯಕ ಜಸ್ಕರನ್ ಸಿಂಗ್ ತಮ್ಮ ಕಂಠಸಿರಿಯಿಂದ ಜೀವತುಂಬಿದರು. ಇದಕ್ಕೆ ಸಭಿಕರು ಸಹ ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದರು. ನೆರೆದವರೆಲ್ಲರೂ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಹೊಂಬೆಳಕಿನ ಕಿರಣದಲ್ಲಿ ತೇಲಾಡಿದರು. ದರ್ಶನ್ ನಾರಾಯಣ್ ಹಾಡಿದ ರಾಮ..ರಾಮ್..ರಾಮ್ ಜಯ ಶ್ರೀರಾಮ..’ ಹಾಡಿಗೆ ಭಕ್ತಿಯನ್ನು ಪ್ರದರ್ಶಿಸಿದರು.
ರವಿಚಂದ್ರನ್ ಅಭಿನಯದ ಸಿಫಾಯಿ ಚಿತ್ರದ ‘ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ...’ ಗೀತೆಗೆ ಸಿನಿರಸಿಕರು ಕುಳಿತಲ್ಲೇ ಹೆಜ್ಜೆ ಹಾಕಿದರು. ಇದರ ನಡುವೆ ಹಾಸ್ಯ ಕಲಾವಿದರಾದ ನಯನಾ, ಸೂರಜ್, ರಾಘವೇಂದ್ರ, ವಾಣಿಗೌಡ ಹಾಗೂ ಹಿತೇಶ್ ಅವರ ಹಾಸ್ಯ ಕಾರಂಜಿ ಸಭಿಕರನ್ನು ರಂಜಿಸಿತು.
ಉದ್ಘಾಟನೆ: ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ.ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು. ಮೈಮುಲ್ ಮಾಜಿ ನಿರ್ದೇಶಕ ಎಚ್.ಸಿ.ಅಶೋಕ್, ಬಸವೇಶ್ವರ ಹೌಸಿಂಗ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ನವೀನ್, ರೋಟರಿ ಸಂಸ್ಥೆಯ ರಾಮಕೃಷ್ಣ, ಮನಿಮಿತ್ರ ಚಿಟ್‌ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಮಂಜುನಾಥ, ನಿರ್ದೇಶಕರಾದ ಕೆ.ಎನ್.ಕುಮಾರಿ, ವಿದ್ಯಾಶ್ರೀ ಇನ್ನಿತರರಿದ್ದರು.