ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರನ್ನು ಸನ್ಮಾನಿಸಲಾಯಿತು. ನಾಗರಾಜ ವಿ. ಬೈರಿ,ಹನಸೋಗೆ ಸೋಮಶೇಖರ್, ಡಿ.ಬಿ. ರಾಜಶೇಖರ ಮೂರ್ತಿ, ಎಂ.ಓಂಪ್ರಕಾಶ್ ಇನ್ನಿತರರಿದ್ದರು. 
ಮೈಸೂರು

ಗಮನ ಸೆಳೆದ ‘ಮರೆಯೋದುಂಟೆ ಮೈಸೂರು ದೊರೆಯ..’

ಪ್ರಮುಖ ಮುಖ್ಯಾಂಶಗಳು

  • ಭಾವಗೀತೆ ಮತ್ತು ಭಕ್ತಿಗೀತೆ ಕಾರ್ಯಕ್ರಮ
  • ಮೈಸೂರಿನ ಜನತೆ ಯಾವತ್ತಿಗೂ ನಾಲ್ವಡಿಯವರಿಗೆ ಕೃತಜ್ಞರಾಗಿರಬೇಕು
ಮೈಸೂರು: ಜನಚೈತನ್ಯ ಫೌಂಡೇಷನ್ ವತಿಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ‘ಮರೆಯೋದುಂಟೆ ಮೈಸೂರು ದೊರೆಯ..’ ಶೀರ್ಷಿಕೆಯ ಭಾವಗೀತೆ ಮತ್ತು ಭಕ್ತಿಗೀತೆ ಕಾರ್ಯಕ್ರಮ ಸಭಿಕರನ್ನು ರಂಜಿಸಿತು.
ಕುವೆಂಪು, ದ.ರಾ.ಬೇಂದ್ರೆ, ದೊಡ್ಡರಂಗೇಗೌಡ ರಚನೆಯ, ಎಸ್.ಜಾನಕಿ, ರತ್ನಮಾಲಾ ಪ್ರಕಾಶ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ 35 ಹಾಡುಗಳನ್ನು ಆರ್.ಲಕ್ಷ್ಮಣ್, ವಿಜಯ್ ಆನಂದ್, ಪುಷ್ಪಲತಾ, ಜಾಯ್ಸ  ವೈಶಾಖ್, ಶ್ರೀಲತಾ ಮನೋಹರ್, ಮೀರಾ, ರೇಖಾ, ಕವಿತಾ ಕಾಮತ್, ರೇಖಾ ಗೌತಮ್, ಬಸವರಾಜ್ ಪ್ರಸ್ತುತಪಡಿಸಿದರು.
‘ಮರೆಯೋದುಂಟೆ ಮೈಸೂರು ದೊರೆಯ’ ಗೀತೆ ರಚನೆಕಾರರಾದ ಹನಸೋಗೆ ಸೋಮಶೇಖರ್ ಮಾತನಾಡಿ, ಮೈಸೂರಿನ ಜನತೆ ಯಾವತ್ತಿಗೂ ನಾಲ್ವಡಿಯವರಿಗೆ ಕೃತಜ್ಞರಾಗಿರಬೇಕು. ಅಷ್ಟೊಂದು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಪ್ರಸ್ತುತ ನಾಡಿನೆಲ್ಲಡೆ ನಾಲ್ವಡಿಯವರನ್ನು ಸ್ಮರಿಸುವ ಕೆಲಸ ಆಗುತ್ತಿದೆ. ರಾಜ್ಯದ ಜನ ಯಾವತ್ತಿಗೂ ಅವರನ್ನು ಮರೆಯಬಾರದು. ಶಿಕ್ಷಣ, ನೀರು, ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯವನ್ನು ಕಲ್ಪಿಸಿಕೊಟ್ಟ ದೇಶದ ಒಬ್ಬ ಆದರ್ಶ ರಾಜರು ನಾಲ್ವಡಿಯವರು ಎಂದು ಸ್ಮರಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿ, ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಪ್ರವಾಸ ಮಾಡಿದಾಗ ಮೈಸೂರಿನಲ್ಲಿ ನಾಲ್ವಡಿಯವರು ಜನತೆಗೆ ಎಷ್ಟೊಂದು ಅತ್ಯುತ್ತಮವಾದ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂಬುದು ಅರಿವಾಗುತ್ತದೆ.
 ನಾಲ್ವಡಿ ಅವರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ರಾಜ್ಯದ ಆದಾಯದಲ್ಲಿ ಮೂರನೇ ಒಂದು ಭಾಗವನ್ನು ಬ್ರಿಟಿಷರಿಗೂ ನೀಡಿ ಅದರ ನಡುವೆ ಎಷ್ಟೊಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದು ಈಗಿನ ಆಡಳಿತಗಾರರಿಗೆ ಮಾದರಿಯಾಗಬೇಕು ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಮ್ ವಾಜಪೇಯಿ, ಜೆ.ಪಿ. ನಗರ ಸ್ಪೋರ್ಟ್ಸ್  ಕ್ಲಬ್ ಅಧ್ಯಕ್ಷ ಡಿ.ಬಿ. ರಾಜಶೇಖರ ಮೂರ್ತಿ, ರೈಲ್ವೆ ಇಲಾಖೆಯ ನಿವೃತ್ತ ಇಂಜಿನಿಯರ್ ಎಂ.ಓಂಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ಇದ್ದರು