ಬಹುರೂಪಿ ಬಾಬಾಸಾಹೇಬ್-ಸಮತೆಯೆಡೆಗೆ ನಡಿಗೆ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮ 
ಮೈಸೂರು

ಹೋರಾಟಗಾರರ ನುಡಿಯೂ ನಡೆಯಾಗುತ್ತಿಲ್ಲ: ಕೋಟಿಗಾನಹಳ್ಳಿ ರಾಮಯ್ಯ

ಪ್ರಮುಖ ಮುಖ್ಯಾಂಶಗಳು

  • ಅವರ ಬೀದಿ ಹೋರಾಟದಲ್ಲಿ ಪ್ರಾಮಾಣಿಕತೆ ಗೋಚರವಾಗುತ್ತಿಲ್ಲ. ಇದುವೇ ಆತಂಕಕ್ಕೆ ಕಾರಣ
  • ನಡೆ ನುಡಿ ಸಮೀಕರಣವಾಗದಿದ್ದರೆ ಅನುಮಾನ ಹುಟ್ಟುವುದು ಸಹಜವೇ.
  • ನೈಜ ಆಕ್ಟಿವಿಸ್ಟ್‌ಗಿಂತ ಮೈಲೇಜ್ ಆಕ್ಟಿವಿಸ್ಟ್‌ಗಳೇ ಅಬ್ಬರ
ಮೈಸೂರು: ಅಂಬೇಡ್ಕರ್ ಹೆಸರಿನಲ್ಲಿ ನಡೆಯುತ್ತಿರುವ ಅನೈಜ ಹೋರಾಟ ಮತ್ತು ಅದನ್ನು ಮಾಡುತ್ತಿರುವ ಹೋರಾಟಗಾರರು ಕಲಾವಿದರಂತೆ, ಪ್ರದರ್ಶಕರಂತೆ ಗೋಚರವಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದ್ದು, ಅವರ ನುಡಿಯೂ ನಡೆಯಾಗುತ್ತಿಲ್ಲ ಎಂದು ಸಾಹಿತಿ, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಕಿರುರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬಹುರೂಪಿ ಬಾಬಾಸಾಹೇಬ್-ಸಮತೆಯೆಡೆಗೆ ನಡಿಗೆ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದೊಂದಿಗೆ ಅಂಬೇಡ್ಕರ್ ಅವರನ್ನು ಸಮೀಕರಣ ಮಾಡುವ ಮೂಲಕ ಒಂದು ವರ್ಗ ಜಾಗೃತವಾಗುತ್ತಿದೆ. ಅವರ ಬೀದಿ ಹೋರಾಟದಲ್ಲಿ ಪ್ರಾಮಾಣಿಕತೆ ಗೋಚರವಾಗುತ್ತಿಲ್ಲ. ಇದುವೇ ಆತಂಕಕ್ಕೆ ಕಾರಣವಾಗುತ್ತಿದೆ ಎಂದರು.
ಅಂಬೇಡ್ಕರ್ ಎಲ್ಲರಿಗೂ ಕಾಮಧೇನು. ಹೋರಾಟ, ಚಿಂತನೆ, ಕೃತಿಯ ಮೂಲಕ ನುಡಿಗಳ ಹಾಲುಕೊಡುತ್ತಿದ್ದಾರೆ. ಪುರಾಣದಂತೆ ಅಪಹರಣ, ಯುದ್ಧ, ಕೊನೆಗೆ ಶರಣಾಗತಿಯಂತೆ ಇಲ್ಲಿಯೂ ಆಗುತ್ತಿದೆಯೇ ಭೀತಿ ಇದೆ.
 ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಸಂಶೋಧಕರು, ವಿದ್ವಾಂಸರು ಅಂಬೇಡ್ಕರ್ ಎಂಬ ಮರದ ಹಣ್ಣುಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಹೀಗಾದರೆ, ಬೇರಿನಲ್ಲಿರುವ ತಳ ಸಮುದಾಯದವರ ಗತಿ ಏನು? ಎಂದು ಪ್ರಶ್ನಿಸಿದರು.
ನಡೆ ನುಡಿ ಸಮೀಕರಣವಾಗದಿದ್ದರೆ ಅನುಮಾನ ಹುಟ್ಟುವುದು ಸಹಜವೇ. ಹೀಗಾದರೆ, ಅಂಬೇಡ್ಕರ್ ಬರೀ ಹೋರಾಟದ  ಪ್ರಕಾರವಾಗುತ್ತಾರೆ. ಅವರು ಬಿಡುಗಡೆಗೆ ಕಾರಣವಾಗದಿದ್ದರೆ ಅವರಿಗೆ ಮಾಡಿ ದ್ರೋಹವೇ ಸರಿ ಎಂದು ಹೇಳಿದರು.
ಬೌದ್ಧಿಕ ಸಾಮಾಜಿಕ ಕಾರ್ಯಕರ್ತರಲ್ಲಿ ಮೈಲೇಜ್ ಪಡೆದುಕೊಳ್ಳುವ ಹಪಾಪಿತನ ಗೋಚರವಾಗುತ್ತಿದೆ. ನೈಜ ಆಕ್ಟಿವಿಸ್ಟ್‌ಗಿಂತ ಮೈಲೇಜ್ ಆಕ್ಟಿವಿಸ್ಟ್‌ಗಳೇ ಅಬ್ಬರಿಸುತ್ತಿದ್ದಾರೆ. ಈ ಕಾರಣದಿಂದಲೇ ನೈಜ ಹೋರಾಟಗಳೂ ರೂಪಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಪ್ರಜಾಪ್ರಭುತ್ವ ಕಮ್ಯುನಿಸ್ಟರಿಗೆ ಮುಖ್ಯವಾಗಲಿಲ್ಲ. ಜಾತಿ ವೈರುಧ್ಯ ಬಿಟ್ಟಿದ್ದು ಚಾರಿತ್ರಿೃಕ ತಪ್ಪು ಎಂಬುದು ಈಗ ಹೇಳುತ್ತಿದ್ದಾರೆ. ಆದರೆ, ಈ ತಪ್ಪನ್ನು ತಿದ್ದಿಕೊಳ್ಳಲು ಕಾರ್ಯಯೋಜನೆ ಏನು? ಅನುಸರಿಸುವ ಯಾವ ಚಿಂತನೆಯೂ ಕಾಣುತ್ತಿಲ್ಲ ಎಂದು ವಿಶ್ಲೇಷಿಸಿದರು.
ಜಾತಿ ಇನ್ನೂ ಗಟ್ಟಿಯಾಗುತ್ತಿರುವುದು ಚಿಂತಿಸುವಂತೆ ಮಾಡಿದೆ. ಅಸಮಾನತೆ ನಿರೀಕ್ಷೆ ಮೀರಿ ಹೆಚ್ಚಾಗುತ್ತಿದೆ. ದೇಶದ ಶೇ.60ರಷ್ಟು ಸಂಪತ್ತು ಶೇ.10ರಷ್ಟ ಸಿರಿವಂತರಲ್ಲಿರುವುದೇ ದೊಡ್ಡ ಅಸಮಾನತೆ ಸಂಕೇತ. ಈ ರೀತಿಯ ಅಸಮಾನತೆ ಶ್ರೇಣೀಕರಣ ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
1970ರ ದಶಕದಂತೆ ಸಾಮಾಜಿಕ ನ್ಯಾಯದ ಹೋರಾಟ ರೂಪಿಸಲು ಈಗ ಆಗುತ್ತಿಲ್ಲ. ಅದು ಸಣ್ಣ ಪ್ರಮಾಣದಲ್ಲಿದ್ದ ದಲಿತ ಮಧ್ಯವರ್ಗದವರ ಸಂಖ್ಯೆ ಇದೀಗ ಗಣನೀಯವಾಗಿ ಹೆಚ್ಚಾಗಿದೆ. ಬೇರಿನಿಂದ ದೂರವಾಗಿರುವ ಅವರಲ್ಲಿ ಸಹೋದರತ್ವ ಮರೆಯಾಗಿ ವಿಚಿತ್ರ ಮನೋಧರ್ಮ ಬೆಳೆಸಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಚಿಂತನೆ ಕುರಿತು ಆಲೋಚಿಸುತ್ತಿಲ್ಲ. ಒಳಮೀಸಲಾತಿ ವಿಚಾರದಲ್ಲಿ ದಲಿತರಲ್ಲಿ ಸಹೋದರತ್ವ ಎಳ್ಳಷ್ಟೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಷ್ಟೊತ್ತಿಗೆ ಜಾತಿ ವಿನಾಶವಾಗಬೇಕಿತ್ತು. ಆದರೆ, ಅದರಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಹೆಸರಿನಲ್ಲಿ ನಡೆಯುತ್ತಿರುವ ಪಂಚತೀರ್ಥ, ಯಾತ್ರಾ ತೀರ್ಥ ಕಾರ್ಯಕ್ರಮಗಳನ್ನು ಏಕೆ ಮಾಡುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಅಂಬೇಡ್ಕರ್ ಅವರನ್ನು ಅಂಬೇಡ್ಕರ್ ಅಲ್ಲದ ರೀತಿಯಲ್ಲಿ ಮಂಡಿಸಲಾಗುತ್ತಿದೆ. ಇದುವೇ ಅವರಿಗೆ ಮಾಡುವ ದ್ರೋಹ. ವೇದಿಕೆಯಲ್ಲಿನ ನುಡಿ ಮಂಥನ ನಡೆಯಾಗದಿದ್ದರೆ ಅರ್ಥವೇ ಇಲ್ಲ ಎಂದು ಎಚ್ಚರಿಸಿದರು
ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ತರಬೇತಿ ಸಂಶೋಧನೆ, ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಸಾಬೀರ್ ಅಹ್ಮದ್ ಮುಲ್ಲಾ, ಮೈವಿವಿ ಅಂಬೇಡ್ಕರ್ ಸಂಶೋಧನಾ, ವಿಸ್ತರಣಾ ಕೇಂದ್ರದ ನಿರ್ದೇಶಕಿ ಪ್ರೊ.ಎಸ್.ನರೇಂದ್ರಕುಮಾರ್, ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್, ಹಿರಿಯ ಕಲಾವಿದೆ ಕೆ.ಆರ್.ನಂದಿನಿ, ಬಸವರಾಜ ದೇವನೂರು, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಇನ್ನಿತರರಿದ್ದರು.