ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಎಸ್.ವೆಂಕಟರವಣಪ್ಪ, ಮೂಗೂರು ನಂಜುಂಡಸ್ವಾಮಿ, ಜಿ.ಪ್ರಕಾಶ್, ಎಚ್.ವಿ. ಸುಬ್ಬರಾವ್ ಇತರರಿದ್ದರು. 
ಮೈಸೂರು

ಹಲವರ ಸಾಧನೆ ಬೆನ್ನಿಗಿದೆ ತಾಯಿಯ ಸ್ಫೂರ್ತಿ:ಮಡ್ಡೀಕೆರೆ ಗೋಪಾಲ್

ಪ್ರಮುಖ ಮುಖ್ಯಾಂಶಗಳು

  • ತಾಯಂದಿರ ಸಲಹೆ ಪಡೆದು ಕಾರ್ಯ ನಿರ್ವಹಿಸಿದವರು ವಿಶ್ವಮಾನ್ಯರಾಗಿದ್ದಾರೆ
  • ಸ್ವಾಮಿ ವಿವೇಕಾನಂದ, ನಾಲ್ವಡಿ ಕೃಷ್ಣರಾಜ ಒಡೆಯರ್, ಛತ್ರಪತಿ ಶಿವಾಜಿ ಇತರರು ಸಾಕ್ಷಿ
ಮೈಸೂರು:ತಾಯಿಯ ಸ್ಫೂರ್ತಿಯಿಂದಲೇ ಹಲವರು ಶಾಶ್ವತವಾಗಿ ಹೆಸರು ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ವಿಶೇಷ ಸಂಸ್ಥೆ, ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಸರಸ್ವತಿಪುರಂನಿಂದ ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ತಾಯಂದಿರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಂದಿರ ಸಲಹೆ ಪಡೆದು ಕಾರ್ಯ ನಿರ್ವಹಿಸಿದವರು ವಿಶ್ವಮಾನ್ಯರಾಗಿದ್ದಾರೆ. ತಾಯಿಯವರ ಸ್ಫೂರ್ತಿಯಿಂದಲೇ ನಾಲ್ವಡಿಯವರು ಕನ್ನಂಬಾಡಿ ಕಟ್ಟೆ, ಮಾರಿಕಣಿವೆ ಜಲಾಶಯ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಶಿವಾಜಿ ಮಹಾರಾಜ ಶತ್ರುಗಳಿಂದ ದೇಶವನ್ನು ಕಾಪಾಡಿದ್ದು, ತಾಯಿಯ ಸಲಹೆಯಂತೆಯೇ ಸ್ಫೂರ್ತಿ ಪಡೆದು ಹೋರಾಡಿದರು. ಸ್ವಾಮಿ ವಿವೇಕಾನಂದರು ವಿಶ್ವದೆಲ್ಲೆಡೆ ಭಾತೃತ್ವ ಪಸರಿಸಿದರು ಎಂದರು.
ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದರು ಸೇರಿದಂತೆ ಎಲ್ಲರಿಗೂ ತಾಯಂದಿರೇ ಸ್ಫೂರ್ತಿಯಾಗಿದ್ದಾರೆ. ಪ್ರತಿಯೊಬ್ಬರೂ ತಾಯಂದಿರನ್ನು ಸದಾಕಾಲ ಸ್ಮರಿಸಬೇಕು. ಕೊನೆಗಾಲದವರೆಗೂ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ತ್ರೀ ಎಂದರೇ ಶಕ್ತಿ. ತಾಯಿಯೇ ದೇವರು. ತಾಯಿ ಒಬ್ಬರಿದ್ದರೆ ಯಾವುದೇ ದೇವರು ಬೇಕಾಗಿಲ್ಲ. ಆದರೂ ಎಷ್ಟೇ ಮಂದಿ ತಾಯಿಯ ತ್ಯಾಗವನ್ನು ಮರೆತು ವೃದ್ಧಾಶ್ರಮಗಳಿಗೆ ಹಾಕಿದ್ದಾರೆ. ಅವರ ಕಣ್ಣೀರಿನ ಕಥೆ ಕೇಳಿದರೆ ವ್ಯಥೆಯಾಗುತ್ತದೆ. ಯಾವ ತಾಯಿಗೂ ಈ ಪರಿಸ್ಥಿತಿ ಬರಬಾರದು. ಈ ರೀತಿ ಆತ್ಮವಂಚನೆ ಮಾಡಿಕೊಂಡು ಯಾವ ಮಕ್ಕಳೂ ಬದುಕು ನಡೆಸಬಾರದು ಎಂದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರಿಗೂ ಯುದ್ಧ ಬೇಡ. ಆದರೂ ಅಮೆರಿಕಾ, ರಷ್ಯಾ ಅಂಥ ಬೃಹತ್ ರಾಷ್ಟ್ರಗಳು ಇರಾನ್, ಉಕ್ರೇನ್ ಮೊದಲಾದ ದೇಶಗಳ ಮೇಲೆ ಯುದ್ಧ ಮಾಡುತ್ತಿವೆ. ಬಹುಶಃ ಅಲ್ಲಿನ ಅಧ್ಯಕ್ಷರಿಗೆ ತಾಯಂದಿರು ಸರಿಯಾಗಿ ಬುದ್ಧಿ ಹೇಳಿಲ್ಲ ಎನಿಸುತ್ತದೆ. ಚಿಕ್ಕಂದಿನಲ್ಲಿ ಹೇಳಿದ್ದರೂ ಈಗ ಅಧ್ಯಕ್ಷರಾಗಿರುವವರು ಕೇಳುತ್ತಿಲ್ಲ ಎನಿಸುತ್ತದೆ. ತಕ್ಷಣ ವಿಶ್ವದೆಲ್ಲೆಡೆ ಯುದ್ಧ ನಿಲ್ಲಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಸರಸ್ವತಿಪುರಂ ಅಧ್ಯಕ್ಷ ಎಸ್.ವೆಂಕಟರವಣಪ್ಪ, ಮಾತನಾಡುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್, ದಂತ ವೈದ್ಯೆ ಡಾ.ಪಾಯಲ್ ಮಾತನಾಡಿದರು.
ಕಸಾಪ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕೋಶಾಧ್ಯಕ್ಷ ಜಿ.ಪ್ರಕಾಶ್, ಶಿಕ್ಷಣ ತಜ್ಞ, ಕಾರ್ಯಕ್ರಮ ಸಂಘಟಕ ಎಚ್.ವಿ.ಸುಬ್ಬರಾವ್ ಇತರರಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿಜಯವಿಠಲ ವಿದ್ಯಾಶಾಲೆಯ ಮನಸ್ವಿನಿ ಪ್ರದೀಪ್, ತೃತೀಯ ಸ್ಥಾನ ಪಡೆದ ಕೆ.ಆರ್.ನಗರ ಬಿ.ಎಸ್.ಮಾದಪ್ಪ ಸಂಸ್ಥೆಯ ವಿನುತಾ, ಸುಮಾ ರಾಜ್‌ಕುಮಾರ್ ಅವರನ್ನು ಜಿಲ್ಲಾ ಕಸಾಪದಿಂದ ಗೌರವಿಸಲಾಯಿತು.
ತಾಯಂದಿರ ದಿನಾಚರಣೆ ಅಂಗವಾಗಿ ಲ್ಯಾಬ್ ಟೆಕ್ನಿಷಿಯನ್‌ಗಳಾದ ವಸಂತಾ, ಮೀನಾ, ಲಕ್ಷ್ಮೀ, ಡಾ.ಪಾಯಲ್ ಇತರರನ್ನು ಮಹಿಳಾ ವಿಶೇಷ ಸಂಸ್ಥೆಯಿಂದ ಸನ್ಮಾನಿಸಲಾಯಿತು.