ತಿ.ನರಸೀಪುರ ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಮಲ್ಲಪ್ಪ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಪಿ.ನಟರಾಜು ಇತರರು ಇದ್ದರು. 
ಮೈಸೂರು

ಮಾನಸಿಕ ನೆಮ್ಮದಿಗೆ ದೇಗುಲಗಳು ಸಹಕಾರಿ

ರವಿಕುಮಾರ್ ಪಿ. ಕೆ
ತಿ.ನರಸೀಪುರ: ಸಮಾಜದಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಸಾಮರಸ್ಯ ಬೆಸೆಯುವ ಜತೆಗೆ ಭಕ್ತಿ, ಭಾವನೆ ಬೆಳೆಸಿ ಮಾನಸಿಕ ನೆಮ್ಮದಿಗೆ ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ವಾಟಾಳು ಮಠಾಧೀಶ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ದೇವಾಲಯಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿದ್ದು, ಅವುಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧಾರ್ಮಿಕ ಚಟುವಟಿಕೆಗಳ ಮುಖ್ಯ ಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ದೇವಸ್ಥಾನದಲ್ಲಿ ಕೆಲ ಕಾಲ ಕುಳಿತುಕೊಳ್ಳುವುದರಿಂದ ಮನಸು ಬಹಳ ಶಾಂತವಾಗುತ್ತದೆ. ಮನಸು ಶಾಂತವಾದಾಗ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ಅವಲೋಕನ ಮಾಡುತ್ತದೆ. ಈ ಸ್ಥಳದಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರುವುದಿಲ್ಲ, ಒಳ್ಳೆಯ ಆಲೋಚನೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ದೇವಸ್ಥಾನದ ಮೊದಲನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಮುಂಜಾನೆ 6 ಗಂಟೆ ಸಮಯದ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಗಣಪತಿ ಹೋಮ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ಮಾಡಲಾಯಿತು. ತಾಲೂಕಿನ ವಿವಿಧೆಡೆಯಿಂದ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳು ಹಾಗೂ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇವಸ್ಥಾನದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಸಂಜೆ ಗ್ರಾಮದಲ್ಲಿ ‘ಹುಲಿವಾಹನ’ ಮೆರವಣಿಗೆ ನಡೆಸಲಾಯಿತು.
ವಾಟಾಳು ಮಠದ ಕಿರಿಯ ಶ್ರೀ ಶಿವಕುಮಾರ ಸ್ವಾಮೀಜಿ, ಹೊಸೂರುಹುಂಡಿ ದಾಸೋಹ ಮಠದ ರಾಜಶೇಖರ ಸ್ವಾಮೀಜಿ, ನಿಲಸೋಗೆ ಭಿಕ್ಷದ ಮಠದ ಮಲ್ಲಪ್ಪಸ್ವಾಮೀಜಿ, ಆಲಗೂಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಳವರಹುಂಡಿ ಪಿ.ನಟರಾಜು, ಪುರಸಭೆ ಮಾಜಿ ಸದಸ್ಯೆ ರೂಪಶ್ರೀ ಪರಮೇಶ್ ಇತರರು ಇದ್ದರು.