ಒಡನಾಡಿ ಸೇವಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ‘ಪ್ರಚಲಿತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ವಿಷಯ ಕುರಿತ ಸಂವಾದದಲ್ಲಿ ಸಬಿಹಾ ಭೂಮಿಗೌಡ , ಸ್ಟ್ಯಾನ್ಲಿ , ಪರಶುರಾಮ, ಲತಾ ಕೆ.ಬಿದ್ದಪ್ಪ ಇತರರು ಇದ್ದರು. 
ಮೈಸೂರು

ತೇಜಸ್ವಿ ಕೃತಿಗಳಲ್ಲಿ ಮಾನವೀಯ ಮೌಲ್ಯ ಮಿಳಿತ: ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ

ಪ್ರಮುಖ ಮುಖ್ಯಾಂಶಗಳು

  • ಕಾಡನ್ನು ಮನುಷ್ಯ ಊಹಿಸುವುದಕ್ಕೆ ಅಸಾಧ್ಯ ಹಾಗೂ ಕಲ್ಪನೆಗೆ ಮೀರಿದ್ದು
  • ತೇಜಸ್ವಿ ಸೃಷ್ಟಿಸುತ್ತಿದ್ದ ಪಾತ್ರಗಳು ನಮ್ಮ ಬಂಧು ಅಥವಾ ನಮ್ಮ ಕಣ್ಣು ಮುಂದೆ ಇರುವ ಪಾತ್ರಗಳೇ ಎನ್ನುವ ಭಾವನೆಯನ್ನು ಮೂಡಿಸುತ್ತವೆ
ಮೈಸೂರು:ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯಗಳ ಜತೆಗೆ ಅರಣ್ಯ, ಪ್ರಾಣಿ, ಕೀಟಗಳ ಬಗ್ಗೆ ಒಲವು ಮೂಡುವಂತಹ ಬರಹವಿದೆ ಎಂದು ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಹೇಳಿದರು.
ನಗರದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ‘ಪ್ರಚಲಿತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಮೈಸೂರಿನಲ್ಲಿ ನೆಲೆಸಿದ್ದ ಕುವೆಂಪು ಅವರು ತಾವು ಚಿಕ್ಕಂದಿನಲ್ಲಿ ಕಂಡ ಮಲೆನಾಡಿನ ವರ್ಣನೆಯನ್ನು ತಮ್ಮ ಕೃತಿ ಮೂಲಕ ಜನರಿಗೆ ತಿಳಿಸಿದರು. ಹೆಚ್ಚು ಕಾಲ ಮಲೆನಾಡಿನಲ್ಲಿ ಸಮಯ ಕಳೆದ ತೇಜಸ್ವಿ ಅವರು ಕುವೆಂಪು ಅಪೇಕ್ಷಿಸಿದ್ದನ್ನು ಅಕ್ಷರಶಃ ಪಾಲಿಸಿ, ಕಾಡನ್ನು ಮನುಷ್ಯ ಊಹಿಸುವುದಕ್ಕೆ ಅಸಾಧ್ಯ ಹಾಗೂ ಕಲ್ಪನೆಗೆ ಮೀರಿದ್ದು ಎಂಬುದನ್ನು ತಮ್ಮ ಬರಹದ ಮೂಲಕ ತೋರಿಸಿಕೊಟ್ಟರು ಎಂದು ಹೇಳಿದರು.
ಪ್ರಾಣಿ, ಪಕ್ಷಿ, ಪ್ರಕೃತಿಯ ಬಗ್ಗೆ ಅವರಿಗೆ ಇದ್ದ ಕಾಳಜಿ, ಕಳಕಳಿ, ತಳವರ್ಗದವರ ಬಗ್ಗೆ ಅವರಿಗೆ ಇದ್ದ ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ಸೃಷ್ಟಿಸುತ್ತಿದ್ದ ಪಾತ್ರಗಳು ನಮ್ಮ ಬಂಧು ಅಥವಾ ನಮ್ಮ ಕಣ್ಣು ಮುಂದೆ ಇರುವ ಪಾತ್ರಗಳೇ ಎನ್ನುವ ಭಾವನೆಯನ್ನು ಮೂಡಿಸುತ್ತವೆ ಎಂದರು.
ಜಾತಿ, ಧರ್ಮ ಎಂದು ಗೋಡೆ ಕಟ್ಟಿಕೊಂಡು ಕುಬ್ಜರಾಗದೆ ಎಲ್ಲರೂ ವಿಶ್ವಮಾನವರಾಗಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಪ್ರತಿಪಾದಿಸುತ್ತಿದ್ದರು. ಅವರ ಚಿದಂಬರ ರಹಸ್ಯ ಕೃತಿಯಲ್ಲಿ ಕೊಳೆತು ನಾರುವ ಸಮಾಜ ಹೋಗಬೇಕು. ಜಾತಿ, ಧರ್ಮದ ಗೋಡೆಯನ್ನು ಒಡೆದು ಮಾನವರಾಗಿ ಬದುಕಬೇಕು ಎಂದು ಸಂದೇಶವಿದೆ. ತೇಜಸ್ವಿ ಹಾಗೂ ಕುವೆಂಪು ಅವರು ತಂದೆ, ಮಗ ಮಾತ್ರವಲ್ಲ ಅವರು ಸಾಹಿತ್ಯ ಲೋಕದಲ್ಲಿ ದೈತ್ಯರು ಎಂದು ಬಣ್ಣಿಸಿದರು.
ಅಂತರ್ಜಾತಿ ವಿವಾಹದ ಬಗ್ಗೆ ಅವರಿಗೆ ಕಾಳಜಿ ಇತ್ತು. ಸರ್ಕಾರದ ಹುದ್ದೆಗಳಲ್ಲಿ ಅಂತಹವರಿಗೆ ಮೀಸಲಾತಿ ನೀಡಬೇಕು ಎಂದು ಚರ್ಚೆ ನಡೆಸಿದವರು. ಅಂತರ್ಜಾತಿ ವಿವಾಹವಾದವರನ್ನು ನಮ್ಮ ಬಂಧುಗಳು ಎನ್ನುತ್ತಿದ್ದರು ಎಂದರು.
ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ಮಾತನಾಡಿ, ತೇಜಸ್ವಿ ಅವರು ಉತ್ತಮ ಸಾಹಿತಿ. ಸಸ್ಯ, ಪ್ರಾಣಿ, ಕಾಡು ಹೀಗೆ ಅನೇಕ ವಿಷಯಗಳಲ್ಲಿ ತಮ್ಮ ಕೃತಿಗಳ ಮೂಲಕವೇ ಸಾಧನೆ ಮಾಡಿ ಅವರು ತಂದೆಯನ್ನೇ ಮೀರಿಸಿದವರು. ಸಾಮಾಜಿಕ ಕಳಕಳಿ, ಜಾತಿ, ಧರ್ಮ, ಕಲಹಗಳ ಬಗ್ಗೆ ದನಿ ಎತ್ತಿದವರು, ಕೋಮುವಾದ ಪ್ರಶ್ನಿಸಿದವರು ಎಂದರು.
ಒಡನಾಡಿಯ ನಿರ್ದೇಶಕ ಪರಶುರಾಮ, ವಿವಿಧ ಕ್ಷೇತ್ರಗಳ ಡಾ.ಯಮುನಾ, ಲತಾ ಕೆ.ಬಿದ್ದಪ್ಪ, ರತಿರಾವ್, ಶಶಿಕಲಾ, ಸತ್ಯಲಿಂಗರಾಜು ಇತರರಿದ್ದರು.