ಇಎಂಆರ್‌ಸಿ ಸಭಾಂಗಣದಲ್ಲಿ ಗುರುವಾರ ಬೋಧಕರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಉದ್ಘಾಟಿಸಿದರು. ಪ್ರೊ.ಎಚ್.ಪಿ.ಜ್ಯೋತಿ, ಪ್ರೊ.ಎಂ.ಎಸ್.ಸಪ್ನ್ನಾ ಇದ್ದರು. 
ಮೈಸೂರು

ಶಿಕ್ಷಕರಿಗೆ ತ್ಯಾಗ, ಪರಿಶ್ರಮ, ಅಧ್ಯಯನ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಅಭಿಮತ
ಮೈಸೂರು: ತ್ಯಾಗ, ಪರಿಶ್ರಮ ಮತ್ತು ನಿರಂತರ ಅಧ್ಯಯನದಿಂದ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಪಠ್ಯವನ್ನು ಕೇವಲ ಕಣ್ತುಂಬಿಕೊಳ್ಳದೆ, ಅದನ್ನು ಆಳವಾಗಿ ಅರ್ಥೈಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ತಿಳಿಸಿದರು.
ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಅಧ್ಯಾಪಕರು, ಅತಿಥಿ ಉಪನ್ಯಾಸಕರಿಗಾಗಿ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿಸೈನಿಂಗ್ ಎಂಗೇಜಿಂಗ್ ಮೂಕ್ಸ್ ವಿಥ್ ಎಐ ಜನರೇಟೆಡ್ ಮಲ್ಟಿಮಿಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ, ಸಮಾಜದ ವಾಸ್ತುಶಿಲ್ಪಿಗಳು. ನಿರ್ವಹಣಾ ಕ್ಷೇತ್ರದಲ್ಲಿ ಬಳಸುವ ಎಸ್‌ಡಬ್ಲುೃಒಟಿ (ಬಲ, ದುರ್ಬಲತೆ, ಅವಕಾಶ, ಆಪತ್ತು) ವಿಶ್ಲೇಷಣೆಯನ್ನು ತಮ್ಮ ವ್ಯಕ್ತಿತ್ವದ ಮೇಲೆ ಅನ್ವಯಿಸಿಕೊಳ್ಳಬೇಕು. ಸರಪಳಿಯ ಬಲ ಅದರ ದುರ್ಬಲ ಕೊಂಡಿಗಳ ಮೇಲೆ ಅವಲಂಬಿತವಾಗಿರುವಂತೆ, ವ್ಯಕ್ತಿತ್ವದ ದುರ್ಬಲತೆ ಸರಿಪಡಿಸಿದರೆ ಶಿಕ್ಷಕರು ಇನ್ನಷ್ಟು ಸದೃಢರಾಗುತ್ತಾರೆ ಎಂದರು
ಒಂದೇ ಅರ್ಹತೆಯುಳ್ಳ ವ್ಯಕ್ತಿಗೂ ಬೇರೆ ವೇದಿಕೆಯಲ್ಲಿ ಅವಕಾಶ ಸಿಕ್ಕರೆ ಮತ್ತಷ್ಟು ಎತ್ತರಕ್ಕೆ ಏರಬಹುದು. ಆದ್ದರಿಂದ ಸೀಮಿತ ವಲಯಕ್ಕೆ ಸೀಮಿತವಾಗದೆ ಚೌಕಟ್ಟಿನ ಹೊರಗೆ ಚಿಂತಿಸಬೇಕು. ಒಂದೇ ವಿಷಯ ಬೋಧಿಸಿದರೂ, ವಿಭಿನ್ನ ಕಾರ್ಯ ಪದ್ಧತಿಯಿಂದ ಕೆಲವರು ಮಾತ್ರ ಉತ್ತುಂಗದಲ್ಲಿರುತ್ತಾರೆ. ಪರಿಶ್ರಮ, ಹೋರಾಟ ಮತ್ತು ಸಾಮರ್ಥ್ಯ ವಿಸ್ತರಣೆಯ ಮೂಲಕವೇ ನಿಜವಾದ ಶಿಕ್ಷಕರಾಗಲು ಸಾಧ್ಯ ಎಂದರು.
ಉತ್ತಮ ಶಿಕ್ಷಕನಾಗಲು ಕೇವಲ ತಾಂತ್ರಿಕ ಜ್ಞಾನವಷ್ಟೇ ಸಾಕಾಗುವುದಿಲ್ಲ. ವಿಷಯದ ಆಳವಾದ ಅರಿವು ಮತ್ತು ಉತ್ತಮ ಬೋಧನಾ ಸಾಮರ್ಥ್ಯ ಇರಬೇಕು. ತರಗತಿಗೆ ಮಾತ್ರ ಶಿಕ್ಷಕನಾದರೆ ವೇದಿಕೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಮೂಕ್ಸ್ ವೇದಿಕೆಯಲ್ಲಿ ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿಷಯವನ್ನು ಸಮಗ್ರವಾಗಿ, ಸ್ಪಷ್ಟವಾಗಿ ಮತ್ತು ಆಳವಾಗಿ ಮಂಡಿಸುವ ಸಾಮರ್ಥ್ಯ ಶಿಕ್ಷಕರಲ್ಲಿ ಇರಬೇಕು ಎಂದರು.
ಹಿಂದಿನ ಕಾಲದಲ್ಲಿ ಸಹಾಯಕ, ಸಹ ಮತ್ತು ಹಿರಿಯ ಪ್ರಾಧ್ಯಾಪಕರ ಹುದ್ದೆಗಳ ನಡುವೆ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಸ್ಪಷ್ಟ ವ್ಯತ್ಯಾಸವಿತ್ತು. ಇಂದಿನ ಸಹಾಯಕ ಪ್ರಾಧ್ಯಾಪಕರು ತಮ್ಮ ಇಂದಿನ ಮಟ್ಟ ಮತ್ತು ಉನ್ನತ ಮಟ್ಟದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಕಾರ್ಯಾಗಾರಗಳು, ಸಂವಾದಗಳು ಮತ್ತು ಚರ್ಚೆಗಳ ಮೂಲಕ ತಮ್ಮ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಂದು ಗಂಟೆಯ ತರಗತಿಗಾಗಿ ನಾಲ್ಕೈದು ಗಂಟೆಗಳ ಅಧ್ಯಯನ ಅಗತ್ಯವಿದೆ. ಗೂಗಲ್‌ನಿಂದ ಮಾಹಿತಿ ಸಂಗ್ರಹಿಸಿ ಬೋಧಿಸುವುದರಿಂದ ಮಾತ್ರ ವಿದ್ಯಾರ್ಥಿಗಳನ್ನು ತೃಪ್ತಿಪಡಿಸಲಾಗುವುದಿಲ್ಲ. ಈಗಿನ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿ ಹೊಂದಿರುವುದರಿಂದ ಶಿಕ್ಷಕರು ಅವರಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕು ಎಂದು ಅಭಿಪ್ರಾಯಪಟ್ಟರು. 
ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ.ಜ್ಯೋತಿ, ಇಎಂಆರ್‌ಸಿ ನಿರ್ದೇಶಕಿ ಪ್ರೊ.ಎಂ.ಎಸ್.ಸಪ್ನ್ನಾ ಇದ್ದರು.