ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕಾರಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು ಪದವಿ ಪ್ರದಾನ ಮಾಡಿದರು. ಡಾ.ಎಂ.ಪುಟ್ಟಸ್ವಾಮಿ, ಡಾ.ಆರ್.ಜಿ.ಉಷಾ, ರಾಜೀವ್ ಶರ್ಮ ಇನ್ನಿತರರಿದ್ದರು
- ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿಕೆ
ಮೈಸೂರು: ಶಿಕ್ಷಕರು ಸಮಾಜದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಆದ್ದರಿಂದ ಅವರ ಮಾತು, ನಡವಳಿಕೆ, ಮೌಲ್ಯಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಬಿಡುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕಾರಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದ 2023-25ನೇ ಸಾಲಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಬಿ.ಇಡಿ ಕೇವಲ ಪದವಿ ಅಲ್ಲ, ಪರಿವರ್ತನೆಯ ಪ್ರಕ್ರಿಯೆ. ಶಿಕ್ಷಕ ಒಂದು ಜೀವಂತ ಮಾದರಿ. ವಿದ್ಯಾರ್ಥಿಗಳು ಪುಸ್ತಕಕ್ಕಿಂತ ಹೆಚ್ಚು ಶಿಕ್ಷಕರ ಜೀವನದಿಂದ ಕಲಿಯುತ್ತಾರೆ ಎಂದರು.
ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಬಾರದು. ಅದು ಮಾನವೀಯತೆ, ನೈತಿಕತೆ ಮತ್ತು ಸಂವೇದನೆ ಬೆಳೆಸುವ ಪ್ರಕ್ರಿಯೆಯಾಗಬೇಕು. ಆದ್ದರಿಂದ ನೀವು ಸದಾ ಕಲಿಯುವ ಶಿಕ್ಷಕರಾಗಬೇಕು. ಹೊಸ ಜ್ಞಾನ ಸ್ವೀಕರಿಸಬೇಕು. ಕೌಶಲ ನವೀಕರಿಸಬೇಕು. ಏಕೆಂದರೆ ಕಲಿಯುವುದನ್ನು ನಿಲ್ಲಿಸಿದ ಶಿಕ್ಷಕ ಬೋಧಿಸಲು ಅರ್ಹನಲ್ಲ ಎಂದರು.
ಇಂದಿನ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಶಿಕ್ಷಣ ಆನ್‌ಲೈನ್ ತರಗತಿಗಳು ಕೃತಕ ಬುದ್ಧಿಮತ್ತೆ ಶಿಕ್ಷಣ ಕ್ಷೇತ ಬದಲಾಯಿಸುತ್ತಿವೆ. ಆದರೆ ಯಾವುದೇ ತಂತ್ರಜ್ಞಾನವೂ ಒಬ್ಬ ಸಂವೇದನಾಶೀಲ ಶಿಕ್ಷಕರ ಸ್ಥಾನವನ್ನು ಭರ್ತಿ ಮಾಡಲಾರದು. ಯಂತ್ರಗಳು ಮಾಹಿತಿ ನೀಡಬಹುದು. ಆದರೆ ಮೌಲ್ಯ ಕಲಿಸುವ ಶಕ್ತಿ ಶಿಕ್ಷಕರಿಗಷ್ಟೇ ಇದೆ ಎಂದರು.
ಪದವಿ ಪಡೆದ ವಿದ್ಯಾರ್ಥಿಗಳ ಜವಾಬ್ದಾರಿ ಇಲ್ಲಿಂದ ಆರಂಭವಾಗುತ್ತದೆ. ಸಮಾಜಕ್ಕೆ ಶಿಕ್ಷಕರಾಗಿ ಹೊರಟಾಗ ಅನೇಕ ಸವಾಲುಗಳಿರುತ್ತವೆ. ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳು, ವಿಭಿನ್ನ ಕಲಿಕಾ ಸಾಮರ್ಥ್ಯಗಳು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇವೆಲ್ಲದರ ಮಧ್ಯೆ ನೀವೊಂದು ಬೆಳಕಿನ ದೀಪವಾಗಬೇಕು ಎಂದು ಹೇಳಿದರು.
ಇತಿಹಾಸವನ್ನು ನೋಡಿದರೆ ಎಲ್ಲ ಮಹಾನ್ ವ್ಯಕ್ತಿಗಳ ಹಿಂದೆ ಒಬ್ಬ ಉತ್ತಮ ಶಿಕ್ಷಕ ಇದ್ದಾನೆ. ಶಿಕ್ಷಕರು ತಮ್ಮ ಉದ್ಯೋಗವಾಗಿ ನೋಡದೇ ಸೇವೆ ಮತ್ತು ಧ್ಯೇಯವಾಗಿ ಸ್ವೀಕರಿಸಬೇಕು.
ನೀವು ಒಬ್ಬ ವಿದ್ಯಾರ್ಥಿಯ ಆತ್ಮವಿಶ್ವಾಸ ಹೆಚ್ಚಿಸಿದರೆ, ಅದು ಒಂದು ಕುಟುಂಬದ ಭವಿಷ್ಯವನ್ನು ಬದಲಾಯಿಸಬಹುದು. ಒಂದು ತರಗತಿಯನ್ನು ಪ್ರೇರೇಪಿಸಿದರೆ ಅದು ಒಂದು ಸಮಾಜವನ್ನು ರೂಪಿಸಬಹುದು. ಆ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರ ಗುರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದಾಗಿದೆ ಎಂದು ಹೇಳಿದರು.
ಸಂಸ್ಥೆಯ ಛೇರ‌್ಮನ್ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಬಿ.ಇಡಿ ಪದವಿ ಪಡೆದ ಎಲ್ಲರಿಗೂ ಶಿಕ್ಷಕ ವೃತ್ತಿ ದೊರೆತರೆ ಸಂತೋಷ. ಉದ್ಯೋಗ ಸಿಗದಿದ್ದರೆ ಶಿಕ್ಷಕರಿಗೆ ಉದ್ಯೋಗ ಕೊಡುವ ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಎಂದರು.
ಮುಖ್ಯ ಆಡಳಿತಾಧಿಕಾರಿ ಪಿ.ಗೀತಾಂಜಲಿ ಮಾತನಾಡಿ, ಅನೇಕ ಸವಾಲುಗಳ ನಡುವೆ ಬಿ.ಇಡಿ ಪದವಿ ಪಡೆದುಕೊಂಡಿದ್ದು, ಈಗ ಎದುರಾಗುವ ಹೊಸ ಸವಾಲು ಎದುರಿಸಲು ಸಜ್ಜಾಗಬೇಕು ಎಂದು ತಿಳಿಸಿದರು.
ಪ್ರಾಂಶುಪಾಲೆ ಡಾ.ಆರ್.ಜಿ.ಉಷಾ ಮಾತನಾಡಿ, ಶಿಕ್ಷಕ ಸಮಾಜದ ಜೀವನ ಜ್ಯೋತಿ. ವಿಜ್ಞಾನಿ, ವೈದ್ಯ, ಪೊಲೀಸರು, ವಕೀಲರನ್ನು ರೂಪಿಸುವ ಏಕೈಕ ವೃತ್ತಿಯಾಗಿದೆ. ಸಮಾಜ ತಿದ್ದುವ ಶ್ರೇಷ್ಠ ವೃತ್ತಿ ಶಿಕ್ಷಕರದು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ರಾಜೀವ್ ಶರ್ಮ, ಸಹ ಪ್ರಾಧ್ಯಾಪಕ ಸಂಜಯ್ ಬಗಡೇಕರ್, ಕೆ.ಆರ್.ಪವಿತ್ರಾ, ಸಹ ಪ್ರಧ್ಯಾಪಕಿ ಡಾ.ಎಂ.ವಿನುತಾ ಇನ್ನಿತರರಿದ್ದರು.