ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಯಂತಿಯಲ್ಲಿ ಶಿವಶರಣರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕೆ.ಹರೀಶ್‌ಗೌಡ, ಡಾ.ಡಿ.ತಿಮ್ಮಯ್ಯ, ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ ಇನ್ನಿತರರಿದ್ದರು
- ಶಾಸಕ ಕೆ.ಹರೀಶ್ ಗೌಡ ಸಲಹೆ
- ಕಾಯಕ ಶರಣರ ಜಯಂತಿ
- ಅಸ್ಪಶ್ಯತೆಯನ್ನು ಹೋಗಲಾಡಿಸಲು ಶಿವಶರಣರು ವಚನಗಳ ಮೂಲಕ ಪ್ರಯತ್ನ
- ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿ ಇರಲು ಕಾಯಕ ಮುಖ್ಯ
ಮೈಸೂರು: ಮರೆಯಾಗುತ್ತಿರುವ ವಚನ ಸಾಹಿತ್ಯವನ್ನು ಪಠ್ಯಕ್ರಮದ ಮೂಲಕ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಅಸ್ಪಶ್ಯತೆಯನ್ನು ಹೋಗಲಾಡಿಸಲು ಶಿವಶರಣರು ವಚನಗಳ ಮೂಲಕ ಪ್ರಯತ್ನಿಸಿದರು. ಯುವ ಪೀಳಿಗೆಗೆ ಇವರ ವಿಚಾರಧಾರೆ ತಿಳಿದುಕೊಳ್ಳಬೇಕು ಎಂದರು
ವಚನಕಾರರ ಸಂದೇಶವನ್ನು ಇಟ್ಟುಕೊಂಡು ಜೀವನ ನಡೆಸಬೇಕು. ಸಮಾಜ ಉತ್ತಮವಾದ ರೀತಿಯಲ್ಲಿ ಇರಬೇಕಾದರೆ ಹಿಂದಿನ ಶಿವಶರಣ ವಚನ ಸಂದೇಶ ಮಹತ್ವ ತಿಳಿದುಕೊಳ್ಳಬೇಕು. ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿ ಇರಲು ಕಾಯಕ ಮುಖ್ಯ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಇತಿಹಾಸ ತಿದ್ದುಪಡಿ ಮಾಡಲು ಯಾರಿಗೂ ಶಕ್ತಿ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಭಾಷೆ, ಧರ್ಮ, ಜಾತಿ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಸಿಕೊಂಡಿದ್ದು, ಸಮಾಜದಲ್ಲಿ ಏಳುಬೀಳು ತಿಳಿದು ಜೀವನ ನಡೆಸಬೇಕು. ಬೇರೆಯವರ ಪೈಪೋಟಿಗೆ ಜೀವನ ಮಾಡುತ್ತಿದ್ದು, ಅತಿಯಾದ ದುರಾಸೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನರು ಅವರ ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಸಂವಿಧಾನದ ಆಶಯದ ಆಧಾರದ ಮೇಲೆ ಜೀವನ ಸಾಗಿಸಬೇಕು. ಹುಟ್ಟು ದೇವರ ಸೃಷ್ಟಿ. ಹುಟ್ಟಿದ ಮೇಲೆ ಜೀವನ ಹೇಗೆ ನಡೆಸಿಕೊಂಡು ಹೋಗುತ್ತೇವೆ ಎಂಬುದು ಬಹಳ ಮುಖ್ಯ ಎಂದರು.
ಕೆಲಸ ಯಾವುದೇ ಇರಲಿ ಭೇದಭಾವವಿಲ್ಲದೆ, ಕೀಳರಿಮೆ ಇಲ್ಲದೆ ಬದುಕನ್ನು ಸಾಗಿಸಬೇಕು. ಸೌಲಭ್ಯಗಳಿಂದ ವಂಚಿತರಾದವರು ಶಿಕ್ಷಣದಿಂದ ಮುಖ್ಯವಾಹಿನಿಗೆ ಬರಲು ಸಾಧ್ಯ. ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಅಗತ್ಯ. ಪ್ರತಿಯೊಬ್ಬರ ಜೀವನ ಬೇರೆಯವರಿಗೆ ಪ್ರೇರಣೆಯಾಗಿರಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಜಾತಿಯನ್ನು ನಾಶ ಮಾಡಲು ಯಾವುದೇ ಔಷಧ ಇಲ್ಲ. ಮನುಷ್ಯನ ಮನಸ್ಥಿತಿಯಿಂದ ಹೋಗಲಾಡಿಸಲು ಮಾತ್ರ ಸಾಧ್ಯ. ಸ್ವಾಮೀಜಿಗಳು ಸಮಾಜ ತಿದ್ದುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಅವಕಾಶ ಬಂದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಬೇಕು ಎಂದರು.
ಸಮಾಜದ ಸುಧಾರಣೆ:
ಉಪನ್ಯಾಸ ನೀಡಿದ ನಿವೃತ್ತ ಅಧಿಕಾರಿ, ಲೇಖಕ ಕೆ.ಪಿ.ರಾಜಯ್ಯ ಅವರು, ಸಮ ಸಮಾಜ ನಿರ್ಮಾಣ, ಜಾತ್ಯತೀತ, ಭಾವೈಕ್ಯತೆ ತತ್ವವನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದರು. ಶಿವಶರಣ ಮಾದಾರ ಚೆನ್ನಯ್ಯನವರು ಅಷ್ಟಲಿಂಗ ಪೂಜೆ ಮಾಡುವುದರೊಂದಿಗೆ ವಚನ ಬರೆದರು ಎಂದರು. ಮಾದರ ಚೆನ್ನಯ್ಯನ ಮತ್ತು ಕರಿಕಾಳಚೋಳ ಇಬ್ಬರು ಶಿವನ ಭಕ್ತರು.
ಬಸವಣ್ಣನವರು ಇವರಿಗೆ ಆದ್ಯ ವಚನಕಾರ ಎಂದು ಕರೆದರು. ಮಾದರ ಚೆನ್ನಯ್ಯನವರು ಅಂದು ತಮಿಳುನಾಡಿಗೆ ಹೋಗಿ ಕಂಚೀಪುರಂನಲ್ಲಿ ಇದ್ದ ವಚನಗಳನ್ನು ತಂದರು. ಬಸವಣ್ಣನವರು 1,96,000 ಜನರಿಗೆ ಲಿಂಗಧಾರಣೆ ಮಾಡಿದರು. ಶಿವಶರಣರು 12ನೇ ಶತಮಾನದಲ್ಲಿ ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅವರ ದಾರಿಯಲ್ಲಿ ಜೀವನ ನಡೆಸಬೇಕು ಎಂದು ಹೇಳಿದರು.
ಭದ್ರ ಬುನಾದಿ:
ಉಪನ್ಯಾಸಕಾರ ಡಾ.ಟಿ.ಮಂಜು ಮಾತನಾಡಿ, 12ನೇ ಶತಮಾನದ ಅವಧಿಯು ತಳಸಮುದಾಯದ ಜನರಿಗೆ ಭದ್ರ ಬುನಾದಿ ಹಾಕಿಕೊಟ್ಟಂತಹ ಯುಗ. ಕೆಳ ವರ್ಗದವರನ್ನು ಕ್ರೂರ, ಹೀನಾಯವಾಗಿ ನಡೆಸಿಕೊಟ್ಟಂತಹ ಕಾಲದಲ್ಲಿ ಉಗಮವಾದವರು ಈ ಶಿವಶರಣರು ಎಂದರು.
ವಿಧಾನಸಭಾ ಪರಿಷತ್ ಸದಸ್ಯ ಸಿ.ಎನ್.ಮಂಚೇಗೌಡ, ಶಿವ ಶರಣರ ಹರಳಯ್ಯ ಮಹಾಸಂಸ್ಥಾನ ಮಠದ ಶ್ರೀ ರುದ್ರಪ್ಪ ಹರಳಯ್ಯ ಸ್ವಾಮೀಜಿ, ಕನ್ನಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇನ್ನಿತರರಿದ್ದರು.