ಮೈಸೂರಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎನ್.ಕೇಶವಮೂರ್ತಿ ಎಂ.ತೇಜಸ್, ಪ್ರಸಾದ್, ಮಹೇಶ್ ಇದ್ದರು. 
ಮೈಸೂರು

ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ಕಲಿಸಿ

ಪ್ರಮುಖ ಮುಖ್ಯಾಂಶಗಳು

  • ಕಾಶವಾಣಿ ಮೈಸೂರು ಕಾರ್ಯಕ್ರಮ ಮುಖ್ಯಸ್ಥ ಎನ್.ಕೇಶವಮೂರ್ತಿ ಸಲಹೆ
ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಆಕಾಶವಾಣಿ ಮೈಸೂರು ಕಾರ್ಯಕ್ರಮ ಮುಖ್ಯಸ್ಥ ಎನ್.ಕೇಶವಮೂರ್ತಿ ಹೇಳಿದರು.
ನಗರದ ಕಲಾಮಂದಿರದಲ್ಲಿ ಮರಿಮಲ್ಲಪ್ಪ ವಿದ್ಯಾಸಂಸ್ಥೆ, ಮರಿಮಲ್ಲಪ್ಪ ಪ್ರೌಢಶಾಲೆಯಿಂದ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆ ಒಂದು ಸಾಗರದಂತೆ. ಅದನ್ನು ಸಮರ್ಥವಾಗಿ ಈಜಿ ದಡ ಸೇರಿದರೆ ಜೀವನದಲ್ಲಿ ಸುಖದ ಸಾಗರ ಲಭಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು. ಸಣ್ಣ ಕಥೆಗಳನ್ನು ಹೇಳುವ ಮೂಲಕ ವಿದ್ಯೆಯ ಮಹತ್ವವನ್ನು ತಿಳಿಸಿದರು.
ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಹೇಳಿದರು.

ಪಾಲಕರು ಕೂಡ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸ್ಕೃತಿ, ಆರೋಗ್ಯ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಆದರ್ಶ ವ್ಯಕ್ತಿ ಹಾಗೂ ಉತ್ತಮ ಪ್ರಜೆಯಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ, ಲೆಫ್ಟಿನೆಂಟ್ ಕರ್ನಲ್ ಎಂ.ತೇಜಸ್, ಮರಿಮಲ್ಲಪ್ಪ ವಿದ್ಯಾಸಂಸ್ಥೆ ಅನೇಕ ವರ್ಷದಿಂದ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಇಲ್ಲಿಯ ಮಕ್ಕಳು ಉತ್ತಮ ಅಧಿಕಾರಿಯಾಗಿ, ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಸಹ ಮುಖ್ಯಶಿಕ್ಷಕ ಎಚ್.ಎಸ್.ಮಹೇಶ್ ಇದ್ದರು.