ಜಾಗತಿಕ ತಂತ್ರಜ್ಞಾನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಕೈಜೋಡಿಸಿದ ಕೆಡಿಇಎಂ ಹಾಗೂ ಗುಡ್‌ ವರ್ಕ್ಸ್ ಗ್ರೂಪ್ 
ಮೈಸೂರು

ರಾಜ್ಯದಲ್ಲಿ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳ (ಜಿಸಿಸಿ) ಸ್ಥಾಪನೆ ಗುರಿ

ಜಾಗತಿಕ ಮಟ್ಟದಲ್ಲಿ ಕರ್ನಾಟಕದ ತಂತ್ರಜ್ಞಾನ ನಾಯಕತ್ವವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಪ್ರಮುಖ ಟೆಕ್ ಇಕೋಸಿಸ್ಟಮ್ ಸಂಸ್ಥೆಯಾದ ಗುಡ್‌ ವರ್ಕ್ಸ್ ಗ್ರೂಪ್ ನಡುವೆ ಬೃಹತ್ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದೆ.

ಈ ನಿಟ್ಟಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದ ಮೂಲಕ ರಾಜ್ಯಕ್ಕೆ ಕನಿಷ್ಠ ₹5,000 ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ಆಕರ್ಷಿಸುವ ಹಾಗೂ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳನ್ನು (ಜಿಸಿಸಿ) ಸ್ಥಾಪಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಸಂಸ್ಥೆಗಳು ತಮ್ಮ ಪ್ರಮುಖ ಆಫೀಸ್ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಕರ್ನಾಟಕದಲ್ಲಿ ಸ್ಥಾಪಿಸಲು ಮತ್ತು ವಿಸ್ತರಿಸಲು ಈ ಸಹಭಾಗಿತ್ವವು ಉತ್ತೇಜನ ನೀಡಲಿದೆ. ಈ ಪಾಲುದಾರಿಕೆಯ ಮೂಲಕ ಹೂಡಿಕೆ ಪ್ರಚಾರ, ವಿದೇಶಿ ಸಂಪರ್ಕ ಸರ್ಕಾರಿ ನೀತಿಗಳ ಬೆಂಬಲ, ಶೈಕ್ಷಣಿಕ ಹಾಗೂ ಉದ್ಯಮ ಮಟ್ಟದ ಕಾರ್ಯತಂತ್ರಗಳ ಮೂಲಕ ರಾಜ್ಯದ ಒಟ್ಟಾರೆ ಟೆಕ್ ವಾತಾವರಣವನ್ನು ಬಲಪಡಿಸಲಾಗುವುದು. ಹೊಸ ಉದ್ಯೋಗಾವಕಾಶಗಳು, ಕೌಶಲ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಸಂಶೋಧನೆಗೆ ವಿಶೇಷ ಒತ್ತು ನೀಡಲಾಗುವುದು.
ತಂತ್ರಜ್ಞಾನ ಹೂಡಿಕೆಯನ್ನು ವೇಗಗೊಳಿಸುವ ಹಾಗೂ ಹೊಸ ಆವಿಷ್ಕಾರವನ್ನು ಉತ್ತೇಜಿಸುವ ಕೆಡಿಇಎಂನ ಕಾರ್ಯತಂತ್ರದ ನಾಯಕತ್ವ ಮತ್ತು ದೃಷ್ಟಿಕೋನದ ಜೊತೆಗೆ, ಜಾಗತಿಕ ಸಂಸ್ಥೆಗಳು ಭಾರತದಲ್ಲಿ ಜಾಗತಿಕ ಮಟ್ಟದ ಕೇಂದ್ರಗಳನ್ನು ಸ್ಥಾಪಿಸಲು, ವಿಸ್ತರಿಸಲು ಮತ್ತು ನಿರ್ವಹಿಸಲು ನೆರವಾಗುವ ಗುಡ್‌ ವರ್ಕ್ಸ್ ಗ್ರೂಪ್‌ ನ ಎಂಟರ್‌ ಪ್ರೈಸ್ ಇಕೋಸಿಸ್ಟಮ್ ಹಾಗೂ ಸಾನ್ನಿಸೋವಿ ಜಿಸಿಸಿ-ಆಸ್-ಎ-ಸರ್ವೀಸ್ ಏಕೀಕೃತ ವೇದಿಕೆಯನ್ನು ಒಟ್ಟುಗೂಡಿಸಲಾಗುತ್ತಿದೆ. ಈ ಸಹಭಾಗಿತ್ವದ ಮೂಲಕ ಕರ್ನಾಟಕದಿಂದ ತಮ್ಮ ಭಾರತದ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಬಯಸುವ ಸಂಸ್ಥೆಗಳಿಗಾಗಿ ಜಾಗತಿಕ ಮಾನ್ಯತೆ ಪಡೆದ ವೇದಿಕೆಯನ್ನು ರೂಪಿಸುವ ಗುರಿ ಹೊಂದಲಾಗಿದೆ.
ಈ ಸಹಯೋಗದ ಭಾಗವಾಗಿ, ಗುಡ್‌ ವರ್ಕ್ಸ್ ಗ್ರೂಪ್ ಮತ್ತು ಸಾನ್ನಿಸೋವಿ ಜಿಸಿಸಿ ಸಂಸ್ಥೆಗಳು ಕೆಡಿಇಎಂ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಲಿವೆ. ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು, ವಲಯ ಆಧಾರಿತ ದುಂಡುಮೇಜಿನ ಸಭೆಗಳನ್ನು ಆಯೋಜಿಸುವುದು, ಅಂತಾರಾಷ್ಟ್ರೀಯ ಉದ್ಯಮ ನಿಯೋಗಗಳಿಗೆ ಸುಲಭ ವಾತಾವರಣ ಕಲ್ಪಿಸುವುದು, ಉದ್ಯಮ ಸಂಶೋಧನೆ ಮತ್ತು ಜಿಸಿಸಿ ವರದಿಗಳನ್ನು ಸಿದ್ಧಪಡಿಸುವುದು, ನೀತಿ ಜಾರಿ ಉಪಕ್ರಮಗಳಿಗೆ ಬೆಂಬಲ ನೀಡುವುದು, ಜ್ಞಾನ ಹಂಚಿಕೆ ವೇದಿಕೆಗಳನ್ನು ನಿರ್ಮಿಸುವುದು, ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮ ರಂಗದ ನಡುವಿನ ಸಹಭಾಗಿತ್ವವನ್ನು ಬಲಪಡಿಸುವುದು ಹಾಗೂ ಉತ್ತರ ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕವನ್ನು ಪ್ರಚುರಪಡಿಸುವ ಕಾರ್ಯಗಳನ್ನು ಕೈಗೊಳ್ಳಲಿವೆ.
ಜೊತೆಗೆ, ಈ ಪಾಲುದಾರಿಕೆಯು ಆಯ್ದ ಪ್ರಮುಖ ಉದ್ಯಮ ವಲಯಗಳಿಗಾಗಿ ವರ್ಚುವಲ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸೇರಿದಂತೆ ವಿಶೇಷ ಇಕೋಸಿಸ್ಟಮ್ ಯೋಜನೆಗಳ ಅಭಿವೃದ್ಧಿಗೆ ಬೆಂಬಲ ನೀಡಲಿದ್ದು, ಸರ್ಕಾರ, ಉದ್ಯಮ ರಂಗ, ಶೈಕ್ಷಣಿಕ ಕ್ಷೇತ್ರ ಮತ್ತು ಜಾಗತಿಕ ಸಂಸ್ಥೆಗಳ ನಡುವೆ ನಿಕಟ ಸಹಯೋಗಕ್ಕೆ ಹಾದಿಮಾಡಿಕೊಡಲಿದೆ.

ಕರ್ನಾಟಕದ ಜಿಸಿಸಿ (ಜಿಸಿಸಿ) ಬೆಳವಣಿಗೆಯ ಮುಂದಿನ ಹಂತಕ್ಕೆ ವೇಗ

ಗುಡ್‌ ವರ್ಕ್ಸ್ ಗ್ರೂಪ್‌ ನ ಆರ್ಥಿಕ ಪ್ರಭಾವದ ಮೌಲ್ಯಮಾಪನದ ಪ್ರಕಾರ, ಈ ಪಾಲುದಾರಿಕೆಯು ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲಿ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ ಗಳ ಸ್ಥಾಪನೆಗೆ ಹಾದಿಮಾಡಿಕೊಡುವ ಗುರಿಯನ್ನು ಹೊಂದಿದ್ದು, ರಾಜ್ಯಕ್ಕೆ ಗಮನಾರ್ಹ ಆರ್ಥಿಕ ಮೌಲ್ಯವನ್ನು ತರಲಿದೆ.

ನಿರೀಕ್ಷಿತ ಪ್ರಭಾವ ಮತ್ತು ಕೊಡುಗೆಗಳು:

ಐಟಿ ಸೇವಾ ಕ್ಷೇತ್ರಕ್ಕೆ ಕಾರ್ಯತಂತ್ರದ ಅನುಕೂಲ: ಇಕೋಸಿಸ್ಟಮ್ ಪಾಲುದಾರಿಕೆಗಳು ಹೆಚ್ಚಿನ ಔಟ್‌ಸೋರ್ಸಿಂಗ್‌ಗೆ ಕಾರಣವಾಗಲಿವೆ

ಉದ್ಯಮ-ಶೈಕ್ಷಣಿಕ ಕ್ಷೇತ್ರಗಳ ಸಹಯೋಗ ಹೆಚ್ಚಳ: ಜಂಟಿ ಸಂಶೋಧನೆ, ಅನುದಾನಗಳು ಮತ್ತು ವಿದ್ಯಾರ್ಥಿವೇತನಗಳಲ್ಲಿ ಗಣನೀಯ ಪ್ರಗತಿ
ಆರ್ಥಿಕ ಪ್ರಭಾವವನ್ನು ಹೊರತುಪಡಿಸಿ, ಈ ಯೋಜನೆಯು ಹೊಸ ಆವಿಷ್ಕಾರ, ಎಂಜಿನಿಯರಿಂಗ್, ಎಐ, ಹಣಕಾಸು ಸೇವೆಗಳು, ಉತ್ಪಾದನೆ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್‌ ಗಳು ಮತ್ತು ಇತರ ಉನ್ನತ ಮೌಲ್ಯದ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ ಗಳಿಗೆ ಕರ್ನಾಟಕವನ್ನು ಅತ್ಯಂತ ಆದ್ಯತೆಯ ತಾಣವಾಗಿ ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಶ್ರೀ ಸಂಜೀವ್ ಗುಪ್ತಾ ಅವರು, "ತನ್ನ ಶಕ್ತಿಯುತ ಕೌಶಲ್ಯಪೂರ್ಣ ಮಾನವಸಂಪನ್ಮೂಲ, ಪ್ರಗತಿಪರ ನೀತಿಗಳು ಮತ್ತು ಉದ್ಯಮ ರಂಗದೊಂದಿಗಿನ ಸಹಯೋಗದ ವಿಧಾನದಿಂದಾಗಿ ಕರ್ನಾಟಕವು ಭಾರತದ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ ಇಕೋಸಿಸ್ಟಮ್‌ ನಲ್ಲಿ ತನ್ನ ನಾಯಕತ್ವವನ್ನು ಕಾಯ್ದುಕೊಂಡಿದೆ. ಗುಡ್‌ ವರ್ಕ್ಸ್ ಗ್ರೂಪ್ ಜೊತೆಗಿನ ನಮ್ಮ ಪಾಲುದಾರಿಕೆಯು ಪೂರಕ ಶಕ್ತಿಗಳನ್ನು ಒಟ್ಟುಗೂಡಿಸಲಿದ್ದು, ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಜೊತೆಗೆ ರಾಜ್ಯದ ಜಿಸಿಸಿ ಆಧಾರಿತ ಬೆಳವಣಿಗೆಯ ಮುಂದಿನ ಹಂತಕ್ಕೆ ವೇಗ ನೀಡಲಿದೆ" ಎಂದು ಹೇಳಿದರು.
ಗುಡ್‌ ವರ್ಕ್ಸ್ ಗ್ರೂಪ್‌ನ ಸಹ-ಸಂಸ್ಥಾಪಕ ವಿಶ್ವಸ್ ಮುದ್ಗಲ್ ಮಾತನಾಡಿ, "ಭಾರತದ ಜಿಸಿಸಿ (ಜಿಸಿಸಿ) ಅವಕಾಶವು ಅತ್ಯಂತ ರೋಚಕ ಹಂತಕ್ಕೆ ಕಾಲಿಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆ ಬದಲಾವಣೆಯ ನಾಯಕತ್ವ ವಹಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಈ ಪಾಲುದಾರಿಕೆಯ ಮೂಲಕ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ ಗಳ ಸ್ಥಾಪನೆಗೆ ಬೆಂಬಲ ನೀಡುವ, ₹5,000 ಕೋಟಿಗೂ ಅಧಿಕ ಹೂಡಿಕೆಯನ್ನು ಆಕರ್ಷಿಸುವ ಮತ್ತು 1.25 ಮಿಲಿಯನ್ ಚದರ ಅಡಿಗೂ ಹೆಚ್ಚಿನ ಜಾಗತಿಕ ಮಟ್ಟದ ಉದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವ ಗುರಿ ಹೊಂದಿದ್ದೇವೆ. ಅತ್ಯಂತ ಮುಖ್ಯವಾಗಿ, ಭಾರತದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಬಯಸುವ ಪ್ರತಿಯೊಂದು ಜಾಗತಿಕ ಸಂಸ್ಥೆಗೆ ಕರ್ನಾಟಕವೇ ಮೊದಲ ಆಯ್ಕೆಯಾಗುವಂತೆ ಶಕ್ತಿಯುತ ಇಕೋಸಿಸ್ಟಮ್ ನಿರ್ಮಿಸಲು ನಾವು ಬಯಸುತ್ತೇವೆ" ಎಂದು ಹೇಳಿದರು.
ಗುಡ್‌ ವರ್ಕ್ಸ್ ಸಹ-ಸಂಸ್ಥಾಪಕಿ ಸೋನಿಯಾ ಶರ್ಮಾ ಮಾತನಾಡಿ, "ಕರ್ನಾಟಕದ ಜಿಸಿಸಿ ಇಕೋಸಿಸ್ಟಮ್‌ ನ ನೈಜ ಯಶಸ್ಸು ಕೇವಲ ಸ್ಥಾಪನೆಯಾಗುವ ಕೇಂದ್ರಗಳ ಸಂಖ್ಯೆಯಿಂದಷ್ಟೇ ಅಲ್ಲ, ಬದಲಿಗೆ ಅವು ಜನರಿಗೆ ಸೃಷ್ಟಿಸುವ ಅವಕಾಶಗಳಿಂದ ಅಳೆಯಲ್ಪಡುತ್ತದೆ. ಈ ಯೋಜನೆಯು 12,500ಕ್ಕೂ ಹೆಚ್ಚು ಉನ್ನತ ಕೌಶಲ್ಯದ ನೇರ ಉದ್ಯೋಗಗಳನ್ನು ಹಾಗೂ ಬೆಂಬಲಿತ ಉದ್ಯಮಗಳಾದ್ಯಂತ ಮತ್ತಷ್ಟು 50,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ನಮ್ಮ ನೆಟ್‌ಸ್ಕಿಲ್ ಲರ್ನಿಂಗ್ ವೇದಿಕೆ, ಎಐ-ಆಧಾರಿತ ಟ್ಯಾಲೆಂಟ್-ಆಸ್-ಎ-ಪೈಪ್‌ ಲೈನ್ ಸೇವೆ ಮತ್ತು ನಮ್ಮ ವ್ಯಾಪಕ ಇಕೋಸಿಸ್ಟಮ್ ಮೂಲಕ ಉದ್ಯಮಕ್ಕೆ ಸಿದ್ಧವಿರುವ ಪ್ರತಿಭೆಗಳನ್ನು ರೂಪಿಸಲು, ವಿಶೇಷ ಜಿಸಿಸಿ ಕಲಿಕಾ ಮಾರ್ಗಗಳನ್ನು ಸೃಷ್ಟಿಸಲು ಮತ್ತು ಮುಂದಿನ ದಶಕದಲ್ಲಿ ಜಾಗತಿಕ ಸಂಸ್ಥೆಗಳಿಗೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವಸಂಪನ್ಮೂಲವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ" ಎಂದರು.
ಕರ್ನಾಟಕವು ಪ್ರಸ್ತುತ 1,100ಕ್ಕೂ ಹೆಚ್ಚು ಜಿಸಿಸಿಗಳಿಗೆ ಅತಿಥ್ಯ ವಹಿಸಿದ್ದು, ಇದು ಭಾರತದ ಒಟ್ಟು ಜಿಸಿಸಿಗಳ ಪೈಕಿ ಸುಮಾರು ಶೇ. 40 ರಷ್ಟಿದೆ. ಹಾಗೂ ಇದರಿಂದ 22 ಬಿಲಿಯನ್ ಯುಎಸ್ ಡಾಲರ್‌ಗೂ ಅಧಿಕ ಆರ್ಥಿಕ ಮೌಲ್ಯ ಉತ್ಪಾದನೆಯಾಗುತ್ತಿದೆ. ಕೆಡಿಇಎಂ ಮತ್ತು ಗುಡ್‌ವರ್ಕ್ಸ್ ನಡುವಿನ ಈ ಪಾಲುದಾರಿಕೆಯು ದೇಶದ ಅತಿ ದೊಡ್ಡ ಮತ್ತು ಸುಸ್ಥಾಪಿತ ಜಿಸಿಸಿ ನೆಲೆಯಾಗಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲಿದೆ ಹಾಗೂ ಜಾಗತಿಕವಾಗಿ ಮನ್ನಣೆ ಪಡೆದ ಆದ್ಯತೆಯ ತಾಣವಾಗಿ ರಾಜ್ಯದ ಸ್ಥಾನಮಾನವನ್ನು ಹೆಚ್ಚಿಸಲಿದೆ.