ಎಚ್.ವಿ. ರಾಜೀವ್ ಸ್ನೇಹ ಬಳಗದಿಂದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಾಧನಾ ಪುರಸ್ಕಾರ ನೀಡಲಾಯಿತು. ಶ್ರೀ ಸೋಮನಾಥಾನಂದ ಸ್ವಾಮೀಜಿ, ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿ, ಶ್ರೀ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್, ಎಚ್.ವಿ. ರಾಜೀವ್, ಬಿ.ಎಲ್. ಭೈರಪ್ಪ, ಕೆ.ವಿ. ಮಲ್ಲೇಶ್ ಹಾಗೂ ಇತರರು ಇದ್ದರು.
ಮೈಸೂರು: ಜಗತ್ತು ಯಾವ ರೀತಿಯ ಕೌಶಲ ನಿರೀಕ್ಷೆ ಮಾಡುತ್ತಿದೆ ಎಂಬುದನ್ನು ಯುವಜನರು ಅರಿತು ಅದಕ್ಕೆ ಪೂರಕವಾಗಿ ತಯಾರಾಗಬೇಕು ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕರೆ ನೀಡಿದರು.
ಎಚ್.ವಿ. ರಾಜೀವ್ ಸ್ನೇಹ ಬಳಗ ವತಿಯಿಂದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಧನಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಯುರೋಪ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ದುಡಿಯುತ್ತಿದ್ದಾರೆ. ಅವರಲ್ಲಿ ಕೌಶಲ ಇರುವ ಕಾರಣಕ್ಕೆ ಅವರಿಗೆ ಉದ್ಯೋಗ ದೊರೆತ್ತಿದೆ. ನೀವು ಸಹ ಅದೇ ರೀತಿಯ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಸಾಕಷ್ಟು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಎಲ್ಲರಿಗೂ ಉದ್ಯೋಗ ದೊರೆಯುತ್ತಿಲ್ಲ. ಇಂಜಿನಿಯರಿಂಗ್ ಶಿಕ್ಷಣದ ಜತೆಗೆ ಪ್ರಸ್ತುತ ಜಗತ್ತು ಬಯಸುತ್ತಿರುವ ಕೌಶಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬದಲಾಗುತ್ತಿರುವ ಜಗತ್ತಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಅವಶ್ಯಕತೆ ಇದೆ. ಇದಕೋಸ್ಕರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಆ ಪ್ರತಿಭೆ ಅರಿತು ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ನಿಮ್ಮ ಸ್ನೇಹಿತರು ಹೇಳುವ ಒಳ್ಳೆಯ ವಿಚಾರಗಳಿಗೆ ಮಾತ್ರ ಕಿವಿಗೊಡಬೇಕು. ಸ್ನೇಹಿತರು ಹೇಳುವ ಎಲ್ಲ ಮಾತುಗಳನ್ನು ಕೇಳಿದರೆ ಹಾದಿ ತಪ್ಪುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಜ್ಞಾನ ಪಡೆಯಲು ನಿಮ್ಮ ಬಳಿ ಎಲ್ಲ ಸೌಲಭ್ಯಗಳು ಇರಬೇಕು ಎಂದೇನು ಅಲ್ಲ. ಕೊರತೆಗಳ ನಡುವೆಯೂ ಸಾಧನೆ ಮಾಡಬಹುದು. ಪಾಲಕರು ಹಾಗೂ ಗುರುಗಳ ಪರಿಶ್ರಮಕ್ಕೆ ತಕ್ಕಹಾಗೆ ವಿದ್ಯಾರ್ಥಿಗಳು ಸಾಧನೆ ತೋರಬೇಕು ಎಂದು ಕರೆ ನೀಡಿದರು.
ಸಂಸ್ಕೃತಿ ಚಿಂತಕ ಆರ್.ಎ. ಚೇತನ್ ರಾಮ್ ಮಾತನಾಡಿ, ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಗೆ ಪೂರಕವಾಗಿ ವಿದ್ಯಾರ್ಥಿಗಳು ತಯಾರಾಗಬೇಕು. ಶೇ.99, 100 ಅಂಕ ಪಡೆದ ಮಾತ್ರಕ್ಕೆ ಎಲ್ಲವನ್ನೂ ಸಾಧಿಸಿದೆ ಎಂಬ ಭ್ರಮೆ ಬೇಡ. ವಿದ್ಯಾರ್ಥಿಗಳು ಹೊಸ ಸವಾಲುಗಳಿಗೆ ತಯಾರಾಗಬೇಕು ಎಂದು ಹೇಳಿದರು.
ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ್ ಶಂಕರ ಉಮಾರಾಣಿ ಮಾತನಾಡಿ, ಅಂಗವಿಕಲತೆ ಇರುವ ನಾನು ಸಾಧನೆ ತೋರಿದ್ದೇನೆ. ಎಲ್ಲ ಅಂಗಗಳು ಸರಿಯಾಗಿ ಇರುವ ತಾವು ಕೂಡ ಸಾಧನೆ ತೋರಬಹುದು. ನನ್ನ ಮನದಲ್ಲಿ 1 ಲಕ್ಷ ಮೊಬೈಲ್ ನಂಬರ್ ಗಳು ಸೇವ್ ಆಗಿದೆ. ವಿದ್ಯಾರ್ಥಿಗಳು ತಾವು ಓದಿದ ವಿಷಯಗಳು ಮನಸ್ಸಿನಲ್ಲಿ ಉಳಿಯಲು ಶ್ರದ್ಧೆಯಿಂದ ಓದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀ ಕುಂದೂರುಮಠದ ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿ, ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಕರೆಸ್ಪಾಂಡೆಂಟ್ ಶ್ರೀ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಅಂಕಣಕಾರ ಎನ್. ರವಿಶಂಕರ್, ಸಾಫ್ಟ್ ಸ್ಕಿಲ್ ತರಬೇತುದಾರ ಆತ್ಮೀಯ ಜೆ. ಕದಂಬ, ಕಾರ್ಯಕ್ರಮ ಸಂಚಾಲಕ ಅಮಿತ್ ಭೈರಪ್ಪ ಹಾಗೂ ಇತರರು ಇದ್ದರು.