ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಇತರರು ಇದ್ದರು. 
ಮೈಸೂರು

ಮೈಸೂರಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಸೂಚನೆ
  • ಅಧಿಕಾರಿಗಳ ಸಭೆ
ಮೈಸೂರು: ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಎರಡ್ಮೂರು ದಿನಕ್ಕೆ ಒಮ್ಮೆ ನೀರು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು. 
ಮೈಸೂರು ನಗರಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪಾಲಿಕೆ, ಹೂಟಗಳ್ಳಿ ನಗರಸಭೆ, ರಮ್ಮನಹಳ್ಳಿ, ಕಡಕೊಳ, ಬೋಗಾದಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಕುಡಿಯುವ ನೀರಿಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಮುಗಿಯುವ ತನಕ ಕಬಿನಿ, ಕೆಆರ್‌ಎಸ್, ಮೇಳಾಪುರ ಯೋಜನೆಯಡಿ ನೀರು ಒದಗಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗಲಿದೆ. ಉಂಡುವಾಡಿ ಯೋಜನೆ ಶಾಶ್ವತ ಪರಿಹಾರವಾಗುವ ತನಕ ಇರುವ ಪೈಪ್‌ಲೈನ್‌ಗಳಲ್ಲಿ ಅಗತ್ಯವಿರುವ ಕಡೆ ನೀರು ಹರಿಸಬೇಕು. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಟ್ಯಾಂಕರ್ ನೀರು ಪೂರೈಸಬೇಕು ಎಂದರು. 
ಯಾವುದೇ ಸಮಸ್ಯೆಗಳು ಇದ್ದಲ್ಲಿ ಕೂಡಲೇ ಪರಿಹರಿಸಬೇಕು. ಸರ್ದಾರ್ ವಲ್ಲಭಬಾಯ್ ಪಟೇಲ್, ವಸಂತನಗರ, ವೆಂಕಟೇಶ್ವರ ಬಡಾವಣೆ, ಮಾನಸಿನಗರ ಸೇರಿದಂತೆ ಹೊಂದಿಕೊಂಡಂತೆ ಇರುವ ಬಡಾವಣೆಗಳಿಗೆ ನೀರು ಕೊಡಲು ಕ್ರಮ ಕೈಗೊಳ್ಳಬೇಕು. 
ವಸಂತನಗರ ಬಡಾವಣೆಯ ಜನರು ಪಾಲಿಕೆಗೆ ದುಡ್ಡು ಕಟ್ಟಿ ಮೂರು ವರ್ಷಗಳಾಗಿರುವ ಕಾರಣ ವಾರಕ್ಕೆ ಎರಡು ದಿನಗಳಿಗೊಮ್ಮೆಯಾದರೂ ನೀರು ಕೊಡಬೇಕು ಎಂದು ನಿರ್ದೇಶಿಸಿದರು. 
ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀನಗರದ ಡಿ ಬ್ಲಾಕ್‌ನಲ್ಲಿ ಬೋರ್‌ವೆಲ್ ಬತ್ತಿ ಹೋಗಿ ನೀರು ಬರುತ್ತಿಲ್ಲ. ಅದೇ ರೀತಿ ಶ್ರೀರಾಂಪುರ, ಬೋಗಾದಿ ಭಾಗಗಳಿಂದಲೂ ನೀರಿನ ಸಮಸ್ಯೆ ಕುರಿತು ದೂರು ಬರುತ್ತಿದೆ. ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕು. ಕಬಿನಿ ಯೋಜನೆಯಡಿ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಂತೆ ಬಳಸಿಕೊಂಡು ಸಮರ್ಪಕವಾಗಿ ಪೂರೈಸಬೇಕು ಎಂದು ಹೇಳಿದರು. 
ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಎಲ್ಲೆಲ್ಲಿ ಕಬಿನಿ, ಕೆಆರ್‌ಎಸ್ ನೀರನ್ನು ಪೂರೈಸಲು ಪೈಪ್‌ಲೈನ್ ಮಾಡಲಾಗಿರುವ ಕಡೆ ಸಂಪರ್ಕ ಕೊಡಬೇಕು. ಅಗತ್ಯವಿದ್ದರೆ ಪೈಪ್‌ಲೈನ್ ಕಾಮಗಾರಿ ಮಾಡಬಹುದು. ವಸಂತನಗರ, ಸರ್ದಾರ್ ವಲ್ಲಭಭಾಯ್‌ಪಟೇಲ್, ನಾಡನಹಳ್ಳಿ ಮೊದಲಾದ ಬಡಾವಣೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ನೀರು ಕೊಡಬೇಕು ಎಂದು ತಿಳಿಸಿದರು.
ಯುಜಿಡಿ ಸಮಸ್ಯೆ ಬಗ್ಗೆ ದೂರು ಬಂದ ತಕ್ಷಣವೇ ಭೇಟಿ ನೀಡಿ ಪರಿಹರಿಸಬೇಕು. ಯುಜಿಡಿ ದೂರು ಬಂದಾಕ್ಷಣ ಕ್ರಮ ವಹಿಸಬೇಕು. ಇದನ್ನು ನಾವು ಹೇಳಿ ಮಾಡಿಸಬೇಕೇ ಎಂದು ಪ್ರಶ್ನಿಸಿದರು.
ವಿಜಯನಗರ 4ನೇ ಹಂತಕ್ಕೆ ಪ್ರತಿದಿನ ಹಂಚಿಕೆಯಾಗಿರುವಂತೆ ನೀರನ್ನು ಒದಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕಬಿನಿಯಿಂದ ಹಂಚಿಕೆಯಾಗಿರುವಂತೆ ಪಾಲಿಕೆ ಸ್ಥಳೀಯ ಸಂಸ್ಥೆಗಳಿಗೆ ನೀರನ್ನು ಒದಗಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಇದಕ್ಕೆ ಪಾಲಿಕೆಯ ಅಧೀಕ್ಷಕ ಅಭಿಯಂತರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಖುದ್ದಾಗಿ ಸ್ಥಳ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಮಾತು ಮುಂದುವರಿಸಿದ ಡಿಸಿ ಅವರು, ಮಳೆ ಕಡಿಮೆಯಾಗುವ ಮುನ್ಸೂಚನೆ ಇರುವ ಕಾರಣ ಜೂನ್, ಜುಲೈ ತಿಂಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಬೋರ್‌ವೆಲ್ ಕೊರೆಸಬೇಕು. ಬತ್ತಿ ಹೋಗಿರುವ ಬೋರ್‌ವೆಲ್ ರೀಡ್ರಿಲ್ ಮಾಡಬೇಕು. ಅದೇ ರೀತಿ ಅಗತ್ಯವಿರುವ ಟ್ಯಾಂಕರ್ ಖರೀದಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಬೇಡಿಕೆಗೆ ತಕ್ಕಂತೆ ಬಡಾವಣೆಗಳಿಗೆ ಟ್ಯಾಂಕರ್ ನೀರು ಪೂರೈಸುವುದಕ್ಕೂ ಅನುಮತಿ ಕೊಡಲಾಗಿದೆ ಎಂದರು.
ಮುಡಾದಲ್ಲಿ ಕಬಿನಿ ಯೋಜನೆಯನ್ನು ಆರಂಭಿಸುವಾಗ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ. 60 ಎಂಎಲ್‌ಡಿ ನೀರಿನಲ್ಲಿ 40 ಎಂಎಲ್‌ಡಿ ನೀರು ಪಾಲಿಕೆಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ 20 ಎಂಎಲ್‌ಡಿ ನೀರು ಹಂಚಿಕೆ ಮಾಡುವ ಬಗ್ಗೆ ಒಪ್ಪಂದವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಕೊಡಬೇಕಾದ ನೀರನ್ನು ಕೊಡದೆ ಇರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ನಾವು ಕೇಳಿದಾಗ ಹೇಳುತ್ತೀರಾ. ನೀವು ಸಭೆ ಮಾಡಿಕೊಂಡು ಪರಿಹರಿಸಬೇಕು. ಪಾಲಿಕೆಯಿಂದ ಕೊಡಬೇಕಾದ ನೀರನ್ನು ಹರಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿಕೊಂಡು ನೀರು ಬರುವಂತೆ ಮಾಡಬೇಕು. ಪಾಲಿಕೆಯಿಂದ ಹಂಚಿಕೆಯಾಗಿರುವ ನೀರನ್ನು ಎಲ್ಲ ಕಡೆ ಹರಿಸುವ ಬಗ್ಗೆ ಪ್ಲಾನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಹಾಗೆಯೇ ಮುಂದುವರಿಯುತ್ತದೆ ಎಂದು ಕಿಡಿಕಾರಿದರು. 
ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸವಾಗಬೇಕು. ಹೂಟಗಳ್ಳಿ, ಕೆಎಚ್‌ಬಿ, ಬೆಳವಾಡಿ, ಕೂರ್ಗಳ್ಳಿ ವಿಜಯನಗರ, ನಾಲ್ಕನೇ ಹಂತ, ಹಿನಕಲ್ ಪ್ರದೇಶದಲ್ಲಿ ಸಾಕಷ್ಟು ಕಡೆಗಳಲ್ಲಿ ಕಸ ಬಿದ್ದಿದೆ. ನಗರದ ಹೊರವಲಯದಲ್ಲಿ ಕಸ ಬಿದ್ದಿರುವುದನ್ನು ನೋಡಿದರೆ ತಲೆತಗ್ಗಿಸುವಂತಾಗಿದೆ.
 ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 15 ದಿನಗಳಿಗೊಮ್ಮೆ ಅಭಿಯಾನ ನಡೆಸಿ ಸ್ವಚ್ಛತಾ ಕಾರ್ಯ ಮಾಡಿಸಬೇಕು. ಪ್ರಮುಖ ರಸ್ತೆಗಳಲ್ಲಿ ಕಸ ಬೀಳದಂತೆ ಕ್ರಮ ಕೈಗೊಕೊಳ್ಳಬೇಕು. ಕಸ ಬಿದ್ದಿರುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
ಎಪಿಎಂಸಿ ವಾಹನಗಳಿಂದ ಹೊಸಹುಂಡಿ, ಉತ್ತನಹಳ್ಳಿ ಮಾರ್ಗದಲ್ಲಿ ಕಸ ಸುರಿದರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಿ. ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿ. ನೀವು ವಾರದಲ್ಲಿ ಎರಡು ದಿನ ರಾತ್ರಿ ಹೊತ್ತು ನಿಂತುಕೊಂಡು ಕಸ ಸುರಿಯುವ ವಾಹನಗಳಿಗೆ ಕೇಸ್ ಹಾಕಿದರೆ ತಡೆಯಬಹುದು ಎಂದು ಹೇಳಿದರು.
ಚಾಮುಂಡಿಬೆಟ್ಟದ ತಪ್ಪಲಿನ ರಸ್ತೆಗಳಲ್ಲಿ ಕಸ ಸುರಿಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಬಂದಿದೆ. ಮೊದಲು ಆಲನಹಳ್ಳಿ ಗ್ರಾಪಂಗೆ ಬಂದರೆ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಕಡಕೊಳ ಪಪಂನಿಂದ ಅಥವಾ ನಗರಪಾಲಿಕೆ ವ್ಯಾಪ್ತಿಗೆ ಸೇರುತ್ತದೋ ಎನ್ನುವುದನ್ನು ನೋಡಬೇಕು. ತಕ್ಷಣವೇ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ನಿರ್ದೇಶಿದರು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಪಾಲಿಕೆ ಅಧೀಕ್ಷಕ ಅಭಿಯಂತರ ಮಂಜುನಾಥ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಚ್.ಎಂ.ಸುರೇಶ್, ಸುಜಯ್, ಮಹೇಶ್ ಎಚ್.ಆರ್.ದೀಪಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಮೊಹಮ್ಮದ್ ಆಸಿಫ್ ಇಕ್ಬಾಲ್, ಪಾಲಿಕೆ ಒಳಚರಂಡಿ ವಿಭಾಗದ ಇಇ ಎ.ಎಂ. ಮೊಹಮ್ಮದ್ ಮುಸ್ತಫಾ, ಇಇ ನಾಗರಾಜು ಮತ್ತಿತರರು ಇದ್ದರು.