ದೇವರಾಜ ಮಾರುಕಟ್ಟೆ  
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆಗೆ ಕ್ರಮ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿಗೆ ಸಂಸದ ಯದುವೀರ್ ಮನವಿ
  • ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳಲ್ಲ, ಸಾಂಸ್ಕೃತಿಕ ಮತ್ತು ವಾಣಿಜ್ಯ ಪರಂಪರೆ ಪ್ರತಿನಿಧಿ
ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾಗಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆ ಹಾಗೂ ನವೀಕರಣಕ್ಕೆ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದೇ ನಮ್ಮ ಮುಖ್ಯ ಧ್ಯೇಯ. ಈ ಸಂಬಂಧ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ಹೇಳಿದ್ದಾರೆ. 
ಐತಿಹಾಸಿಕವಾಗಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇ 4ರಂದು ನೀಡಿದ ತೀರ್ಪು ಅತ್ಯಂತ ಮಹತ್ವದ್ದಾಗಿದೆ ಎಂದು ವಿವರಿಸಿದ್ದಾರೆ.
ಕಟ್ಟಡ ಕೆಡವಿ ಪುನರ್ ನಿರ್ಮಾಣದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. 19ನೇ ಶತಮಾನದ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ, ನವೀಕರಿಸಲು ಆದೇಶಿಸಿದೆ ಎಂದು ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.
ರೂರ್ಕಿಯ ಐಐಟಿ ಸಲ್ಲಿಸಿರುವ ತಾಂತ್ರಿಕ ಅಧ್ಯಯನ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸುಮಾರು ಶೇ.70ರಷ್ಟು ದುರಸ್ತಿ ಮಾಡಬಹುದಾಗಿದೆ. ಹಾಲಿ ಇರುವ ಅಡಿಪಾಯ ಸಂರಕ್ಷಣೆ ಮತ್ತು ನವೀಕರಣ ಸಾಧ್ಯವಾಗಲಿದೆ ಎಂದು ಯದುವೀರ್ ವಿವರಿಸಿದ್ದಾರೆ. 
ನಾಗರಿಕ ವಾಸ್ತುಶಿಲ್ಪ ಸಮೂಹಗಳು ಮೈಸೂರಿನ ಅವಿಭಾಜ್ಯ ಅಂಗವಾಗಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಸಂರಕ್ಷಿಸಲು ಬದ್ಧವಾಗಿದ್ದು, ನ್ಯಾಯಾಂಗ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಸದರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಐಐಟಿ ರೂರ್ಕಿ ಮತ್ತು ಇಂಟಾಚ್ ತಜ್ಞರ ಸಮಿತಿ ನೀಡಿರುವ ಶಿಫಾರಸಿನ ಅನ್ವಯ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿಕೊಂಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರಗಳು (ಎಂಡಿಎ) ಈ ಯೋಜನೆಯನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಸೂಚನೆ ನೀಡಬೇಕು ಎಂದು ಸಿಎಂ ಬಳಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಹಂಚಿಕೆಯಾದ ಹಣವನ್ನು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮಾತ್ರ ಬಳಸಲಾಗುತ್ತಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.
2024-25ರ ಬಜೆಟ್‌ನಲ್ಲಿ ದೇವರಾಜ ಮಾರುಕಟ್ಟೆಯ ನವೀಕರಣಕ್ಕೆ 95 ಕೋಟಿ ರೂ. ಮತ್ತು ಲ್ಯಾನ್ಸ್‌ಡೌನ್ ಕಟ್ಟಡಕ್ಕೆ 35 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು  ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕೇವಲ ಕಟ್ಟಡಗಳಲ್ಲ, ಇವು ಮೈಸೂರಿನ ಜೀವಂತ ಸಾಂಸ್ಕೃತಿಕ ಮತ್ತು ವಾಣಿಜ್ಯ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಅವರು ಇವುಗಳ ಸಂರಕ್ಷಣೆ ಮತ್ತು ನವೀಕರಣಕ್ಕೆ ಆದ್ಯತೆ ನೀಡಿ, ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.