ತಿ.ನರಸೀಪುರ ತಾಲೂಕು ಕೇತುಪುರ ಗ್ರಾಮಕ್ಕೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ಭೇಟಿ ನೀಡಿದ್ದರು. ಟಿ.ಜಿ. ಸುರೇಶಾಚಾರ್, ಸಿ.ಜಿ.ಗೀತಾ, ಸಿ.ಉಮಾ ಮಹದೇವ, ಶಿವಪ್ರಕಾಶ್ ಇದ್ದರು. 
ಮೈಸೂರು

ಶೀಘ್ರ ಇ-ಸ್ವತ್ತು ನೀಡಲು ಕ್ರಮಕೈಗೊಳ್ಳಿ

ಲಲಾಟಾಕ್ಷ ಎಸ್
ತಿ.ನರಸೀಪುರ: ಕೇತುಪುರ ಹಾಗೂ ಬೇವಿನಹಳ್ಳಿ ಆಶ್ರಯ ನಿವೇಶನದ ಫಲಾನುಭವಿಗಳಿಗೆ ಶೀಘ್ರ ಇ-ಸ್ವತ್ತು ನೀಡಲು ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ತಹಸೀಲ್ದಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ಸೂಚನೆ ನೀಡಿದರು.
ತಾಲೂಕಿನ ಕೇತುಪುರ ಗ್ರಾಮದಲ್ಲಿ ಬುಧವಾರ ಕೇತುಪುರ ಹಾಗೂ ಬೇವಿನಹಳ್ಳಿ ಗ್ರಾಮಗಳ ದಲಿತರು ಹಾಗೂ ಹಿಂದುಳಿದ ವರ್ಗದ ಆಶ್ರಯ ನಿವೇಶನದ ಫಲಾನುಭವಿಗಳಿಗೆ ದಶಕಗಳಿಂದ ಇ-ಸ್ವತ್ತು ನೀಡದ ಬಗ್ಗೆ ದಲಿತ ಸಂಘರ್ಷ ಸಮಿತಿ(ಬಣ ರಹಿತ) ದೂರು ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಪರಿಶೀಲನೆ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್, ಅಧಿಕಾರಿಗಳು ಇ - ಸ್ವತ್ತು ನೀಡಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ಕೇತುಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಕೆಲವು ದಾಖಲೆಗಳ ಹಸ್ತಾಂತರ ಆಗಬೇಕಾಗಿದೆ ಎಂದು ಲೋಕಾಯುಕ್ತರ ಗಮನಕ್ಕೆ ತಂದರು. ಈ ವೇಳೆ ಡಿವೈಎಸ್ಪಿ ವೆಂಕಟೇಶ್ ತಾಪಂ ಇಒಗೆ ಕರೆ ಮಾಡಿ ಶೀಘ್ರ ಅಗತ್ಯ ದಾಖಲೆಗಳನ್ನು ಹಸ್ತಾಂತರ ಮಾಡುವಂತೆ ಸೂಚನೆ ನೀಡಿದರು. ಅಲ್ಲದೆ ಬನ್ನೂರು ಹೋಬಳಿ ಹನುಮನಾಳು ಗ್ರಾಮದ ರೈತರ ಜಮೀನುಗಳಿಗೆ ತೆರಳುವ ರಸ್ತೆ ಒತ್ತುವರಿ ಆಗಿರುವ ಬಗ್ಗೆ ಕ್ರಮ ಕೈಗೊಂಡು ಅನುಪಾಲನಾ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಜಿಲ್ಲಾ ಸಂಚಾಲಕಿ ಸಿ.ಉಮಾ ಮಹದೇವ ಮಾತನಾಡಿ, ಅಂದಿನ ಜಿಲ್ಲಾಧಿಕಾರಿಗಳು ಗೆಜೆಟ್ ನೋಟಿಫಿಕೇಷನ್ ಮಾಡಿ ಕಂದಾಯ ಇಲಾಖೆ ಹಾಗೂ ಪಂಚಾಯತ್ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ನಿವೇಶನಗಳನ್ನು ಹಂಚಿಕೆ ಮಾಡಿರಲಿಲ್ಲ. ಈ ಬಗ್ಗೆ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ಮಾಡಿದ್ದರ ಪರಿಣಾಮ 2014ರಲ್ಲಿ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಿದ್ದರು. ಸದರಿ ನಿವೇಶನಗಳಿಗೆ ಕಂದಾಯ ಕಟ್ಟಿದ್ದರೂ ಇ-ಸ್ವತ್ತು ನೀಡದೆ ಸತಾಯಿಸುತ್ತಿದ್ದ ಕಾರಣ 2023ರಲ್ಲಿ ಸಲ್ಲಿಸಿದ್ದ ದೂರಿನನ್ವಯ ಮೂರು ವರ್ಷದಿಂದ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳ ನಿರಂತರ ಪರಿಶೀಲನೆ ನಂತರ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ, ತಿ.ನರಸೀಪುರ ಹಿಂದಿನ ತಹಸೀಲ್ದಾರ್ ಗೀತಾ, ದಲಿತ ಸಂಘರ್ಷ ಸಮಿತಿ(ಬಣ ರಹಿತ) ಜಿಲ್ಲಾ ಸಂಘಟನಾ ಸಂಚಾಲಕ ಆಲತ್ತೂರು ಶಿವರಾಜ್, ತಾಲೂಕು ಸಂಚಾಲಕ, ಕೇತುಪುರ ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ರಕಾಶ್, ತಾಲೂಕು ಸಂಘಟನಾ ಸಂಚಾಲಕ ಚಂದಹಳ್ಳಿ ಮಲ್ಲೇಶ್, ಬೇವಿನಹಳ್ಳಿ ದಿನೇಶ್, ಕುರಿಸಿದ್ದನಹುಂಡಿ ರಾಜು, ರವೀಂದ್ರ ಕೇತುಪುರ, ಶಿವನಂಜು ಕೇತುಪುರ, ಬೇವಿನಹಳ್ಳಿ ಲತಾ, ಸರೋಜಾ, ಹೇಮಲತಾ ಇತರರಿದ್ದರು.