ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಎಸ್. ಯುಕೇಶ್ ಕುಮಾರ್, ದಾಕ್ಷಾಯಣಿ ಇತರರು ಇದ್ದರು. 
ಮೈಸೂರು

ಶಿಶು ಮರಣ ತಡೆಯಲು ಮುನ್ನೆಚ್ಚರಿಕೆ ವಹಿಸಿ:ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಶಿಶು ಮರಣವನ್ನು ಶೂನ್ಯಕ್ಕೆ ಇಳಿಸಲು ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು
  • ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವಲ್ಲಿ ವಿಳಂಬಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ
ಮೈಸೂರು:ಚೆಲುವಾಂಬ ಆಸ್ಪತ್ರೆಯಲ್ಲಿ ಆಗುತ್ತಿರುವ ಶಿಶು ಮರಣವನ್ನು ಅದಷ್ಟು ಕಡಿಮೆ ಮಾಡಬೇಕು. ಶಿಶು ಮರಣವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ ಸಂಭವಿಸುತ್ತಿರುವ ಶಿಶು ಮರಣಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಶು ಮರಣವನ್ನು ಶೂನ್ಯಕ್ಕೆ ಇಳಿಸಲು ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆಗಸ್ಟ್‌ನಲ್ಲಿ 9, ಡಿಸೆಂಬರ್‌ನಲ್ಲಿ 8 ಹಾಗೂ ಮಾರ್ಚ್‌ನಲ್ಲಿ 9 ಶಿಶು ಮರಣಗಳು ಸಂಬವಿಸಿವೆ. ಇದು ಬೇರೆ ಮಾಸಿಕಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇದೇ ರೀತಿ ಶಿಶು ಮರಣವನ್ನು ಒಂದು ಅಂಕಿಗೆ ಇಳಿಸಿ ಶೂನ್ಯದತ್ತ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿ ಸಿಬ್ಬಂದಿ ಕಾರ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಆಗದ ಕ್ರಿಟಿಕಲ್ ಪ್ರಕರಣಗಳನ್ನು ಎರಡು ಮೂರು ದಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಇಟ್ಟುಕೊಂಡು ಕಳುಹಿಸದೆ ಅದಷ್ಟು ಬೇಗ ಶಿಪಾರಸ್ಸು ಮಾಡಿ ಕಳುಹಿಸಬೇಕು. ಇದರಿಂದ ಉತ್ತಮ ಚಿಕಿತ್ಸೆ ನೀಡಿ ಶಿಶು ಮರಣ ತಡೆಯಬಹುದಾಗಿದೆ ಎಂದರು.
ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ ಜನವರಿಯಿಂದ ಮಾರ್ಚ್‌ವರೆಗೆ 23 ಶಿಶು ಮರಣ ಆಗಿವೆ. ಈ 23 ಪ್ರಕರಣಗಳನ್ನು ಅಧ್ಯಯನ ಮಾಡಿ ಕೆಳ ಹಂತದ ಆಸ್ಪತ್ರೆಗಳ ಲೋಪ ಏನು? ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವಲ್ಲಿ ವಿಳಂಬಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ದಾಕ್ಷಾಯಣಿ ಮಾತನಾಡಿ, ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶು ವೈದ್ಯರು 6 ಸಂಖ್ಯೆ ಬೇಕಿದ್ದು, 5 ಹುದ್ದೆಗಳು ಖಾಲಿ ಇವೆ. ಶುಶ್ರೂಷಕರು 96 ಹುದ್ದೆಗಳು ಇದ್ದು, 59 ಕರ್ತವ್ಯ ನಿರ್ವಹಿಸುತ್ತಿದ್ದಾರೆ. 40 ಹುದ್ದೆಗಳು ಖಾಲಿ ಇವೆ. ಗ್ರೂಪ್ ಡಿ 16 ಹುದ್ದೆಗಳು ಇದ್ದು, 12 ಹುದ್ದೆಗಳು ಖಾಲಿ ಇವೆ. ಚೆಲುವಾಂಬ ಆಸ್ಪತ್ರೆಯಲ್ಲಿ ಹುದ್ದೆಗಳ ಕೊರತೆ ಇದೆ. ಜನವರಿಯಲ್ಲಿ 15, ಫೆಬ್ರವರಿಯಲ್ಲಿ 18, ಮಾರ್ಚ್‌ನಲ್ಲಿ 9 ಶಿಶು ಮರಣ ಸಂಭವಿಸಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.