ಬೆಟ್ಟದಪುರ ಸಮೀಪದ ನಾಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಕೇಂದ್ರದವತಿಯಿಂದ ರಾಷ್ಟ್ರೀಯ ಡೆಂಘೆ ವಿರೋಧಿ ದಿನವನ್ನು ಆಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
- ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ಸಲಹೆ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಸಮೀಪದ ನಾಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಡೆಂಘೆ ವಿರೋಧಿ ದಿನವನ್ನು ಆಚರಿಸಿ, ಸಾರ್ವಜನಿಕರಲ್ಲಿ ಡೆಂಘೆ ತಡೆ ಕುರಿತು ಜಾಗೃತಿ ಮೂಡಿಸಲಾಯಿತು.
ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ಮಾತನಾಡಿ, ಡೆಂಘೆ ಜ್ವರವು ಸೊಳ್ಳೆ ಕಚ್ಚುವಿಕೆಯಿಂದ ಹರಡುವ ವೈರಸ್ ಆಗಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಪ್ರಮುಖ ಲಕ್ಷಣಗಳಾದ ತೀವ್ರ ಜ್ವರ, ಮೈ-ಕೈ ನೋವು, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು ಹಾಗೂ ಚರ್ಮದ ಮೇಲೆ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಡೆಂಘೆಗೆ ನಿರ್ದಿಷ್ಟ ಔಷಧಿ ಇಲ್ಲದಿದ್ದರೂ, ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ವಾರಕ್ಕೆ ಎರಡು ಬಾರಿ ನೀರಿನ ಸಂಗ್ರಹ ಪಾತ್ರೆಗಳನ್ನು ತೊಳೆದು ಒಣಗಿಸಿ ಮರುಭರ್ತಿ ಮಾಡುವುದು, ನೀರಿನ ಟ್ಯಾಂಕ್‌ಗಳನ್ನು ಮುಚ್ಚಿಡುವುದು, ಒಡೆದ ಬಾಟಲಿಗಳು, ತೆಂಗಿನ ಚಿಪ್ಪುಗಳು, ಟೈರ್‌ಗಳು ಸೇರಿದಂತೆ ನೀರು ನಿಲ್ಲುವ ಘನತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸುವುದು ಅಗತ್ಯವಾಗಿದೆ. ಸ್ವಯಂ ರಕ್ಷಣಾ ಕ್ರಮವಾಗಿ ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ನಿವಾರಕ ಬಳಸುವುದು ಹಾಗೂ ಕಿಟಕಿ-ಬಾಗಿಲುಗಳಿಗೆ ಜಾಲರಿ ಅಳವಡಿಸಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಮಮತಾ, ಸಮುದಾಯ ಆರೋಗ್ಯಾಧಿಕಾರಿ ಅನಿಲ್, ಶಿಕ್ಷಕರಾದ ಅರುಣ್ ಕುಮಾರ್, ಸೋಮಶೇಖರ್, ಅಂಗನವಾಡಿ ಕಾರ್ಯಕರ್ತೆ ಪುಟ್ಟರತ್ನಾ, ಆಶಾ ಕಾರ್ಯಕರ್ತೆ ಸುಮಾ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.