ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು.ಎಸ್.ಯುಕೇಶ್ ಕುಮಾರ್, ಶೇಕ್ ತನ್ವೀರ್ ಆಸಿಫ್, ಡಾ.ಪಿ. ಶಿವರಾಜು ಇನ್ನಿತರರಿದ್ದರು. · 
ಮೈಸೂರು

ಕುಡಿವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚನೆ
  • ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ಮೈಸೂರು: ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಕೆಆರ್‌ಎಸ್, ಕಬಿನಿ ಅಣೆಕಟ್ಟುಗಳಲ್ಲಿ ಇರುವ ನೀರಿನ ಲಭ್ಯತೆಯ ಮಾಹಿತಿಯನ್ನು ಪಡೆದ ಅವರು, ಜೂನ್ ಅಂತ್ಯದವರೆಗೆ ಅಣೆಕಟ್ಟುಗಳಲ್ಲಿ ಇರುವ ನೀರಿನ ಪ್ರಮಾಣ ಸಾಕಾಗುತ್ತದೆ. ಕಬಿನಿ ಅಣೆಕಟ್ಟಿನಿಂದ ಅಗತ್ಯವಿದ್ದಾಗ ಕಬಿನಿಯಿಂದ ಕಾಲುವೆ ಮೂಲಕ ನೀರನ್ನು ಕಾಲ ಕಾಲಕ್ಕೆ ಹರಿಸಿ ಕುಡಿಯುವ ನೀರನ್ನು ಪೂರೈಸುವಂತೆ ಕಬಿನಿ ನೀರಾವರಿ ನಿಗಮದ ಅಧಿಕಾರಿಗೆ ಸೂಚನೆ ನೀಡಿದರು. 
ತಹಸೀೀಲ್ದಾರರು ತಾಲೂಕು ಮಟ್ಟದಲ್ಲಿ ಪ್ರತಿ ವಾರ ಕುಡಿಯುವ ನೀರಿನ ನಿರ್ವಹಣೆ ಕುರಿತು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿ ಸಭೆ ನಡೆಸಬೇಕು ಎಂದು ನಿರ್ದೇಶಿಸಿದರು. 
ಬೇಸಿಗೆ ಕಾಲದಲ್ಲಿ ಉಂಟಾಗುವ ಕಾಳ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೈಗೊಳ್ಳಬೇಕು. ಕಳೆದ ವರ್ಷ ಚಾಮುಂಡಿಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಾರಿ ಅಗತ್ಯಕ್ರಮ ವಹಿಸಬೇಕು ಎಂದು ತಿಳಿಸಿದರು. 

ಮೊದಲೇ ಗುರುತಿಸಿ: 

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಮೊದಲೇ ಗುರುತಿಸಿಕೊಳ್ಳಬೇಕು. ನೀರಿನ ಸಮಸ್ಯೆ ಉಂಟಾದ ನಂತರ ಕ್ರಮ ವಹಿಸುವ ಬದಲು ಮೊದಲೇ ಕ್ರಮ ವಹಿಸಬೇಕು. ನೀರಿನ ನಲ್ಲಿಗಳಿಗೆ ಆಫ್ ಆ್ಯಂಡ್ ಆನ್ ಕ್ಯಾಪ್‌ಗಳನ್ನು ಅಳವಡಿಸಬೇಕು. ಅಗತ್ಯವಿದ್ದರೆ ಕೊಳವೆಬಾವಿಗಳನ್ನು ಕೊರೆಸಲು ಕ್ರಮ ವಹಿಸಲಾಗುವುದು ಎಂದರು. 
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು