.ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಆಗ್ರಹಿಸಿ ರೈತರು ಧರಣಿ ಸ್ಥಳಕ್ಕೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಮಾಹಿತಿ ಪಡೆದರು. ಡಿಸಿಎಫ್ ಕಿರುಬನಾಥನ್, ಡಿವೈಎಸ್ಪಿ ರವಿ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಎಸಿಎಫ್ ಕಿರಣ್ ಕುಮಾರ್ ಸೇರಿದಂತೆ ರೈತರು ಇದ್ದರು. ಕೂಡ್ಲೂರು ಗ್ರಾಮದಲ್ಲಿ ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ, ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದರು. 
ಮೈಸೂರು

ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಿ

ಲೋಕೇಶ್ ಮನು. ಡಿ
ಹನಗೋಡು: ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಹಸುವನ್ನು ಬಲಿ ಪಡೆದಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಆಗ್ರಹಿಸಿ ರೈತರು ಹಾಗೂ ಹೈನುಗಾರರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ, ಪ್ರತಿಭಟನಾಕಾರರ ಮನವಿ ಆಲಿಸಿದರು.
ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದ ರೇವಣ್ಣ ಅವರ ಹಸುವನ್ನು ಶುಕ್ರವಾರ ಮಧ್ಯಾಹ್ನ ಹುಲಿ ಬಲಿ ಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರಾದೇಶಿಕ ಅರಣ್ಯ ವಿಭಾಗದ ಎಸಿಎಫ್ ಕಿರಣ್ ಕುಮಾರ್, ಆರ್‌ಎಫ್‌ಒ ಸಂತೋಷ್ ಹೂಗಾರ್ ಸೇರಿದಂತೆ ಅರಣ್ಯ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಎಚ್.ಪಿ.ಮಂಜುನಾಥ್ ಅವರು ಹುಲಿ ದಾಳಿಯಿಂದ ಹಸು ಮೃತಪಟ್ಟ ಸ್ಥಳವನ್ನು ಪರಿಶೀಲಿಸಿ, ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದರು. ಬಳಿಕ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ, ಈ ಭಾಗದಲ್ಲಿ ಹಲವು ದಿನಗಳಿಂದ ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಕುರಿತು ಗಮನಕ್ಕೆ ತಂದರು. ಜನ-ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಕಾನೂನುಬದ್ಧವಾಗಿ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಂತರ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಕಿರುಬನಂದನ್, ಎಸಿಎಫ್ ಕಿರಣ್ ಕುಮಾರ್, ಆರ್‌ಎಫ್‌ಒ ಸಂತೋಷ್ ಹೂಗಾರ್ ಹಾಗೂ ಪಶುವೈದ್ಯಾಧಿಕಾರಿ ಡಾ.ರಮೇಶ್ ಅವರೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ಕುರಿತು ಚರ್ಚಿಸಿದರು. ಅರಣ್ಯ ಇಲಾಖೆ ಕೈಗೊಳ್ಳುವ ಕಾರ್ಯಾಚರಣೆಗೆ ರೈತರು ಹಾಗೂ ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.
ಡ್ರೋನ್ ಮೂಲಕ ಕಣ್ಗಾವಲು: ಹುಲಿ ಸೆರೆ ಕಾರ್ಯಾಚರಣೆಗಾಗಿ ಶುಕ್ರವಾರ ರಾತ್ರಿ ಇಡೀ 25ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮರಾ ಮೂಲಕ ಕಣ್ಗಾವಲು ನಡೆಸಿದರು. ಹುಲಿ ಇರುವ ಸ್ಥಳದ ಮಾಹಿತಿ ಕಲೆಹಾಕಲಾಗುತ್ತಿದ್ದು, ಸಾಕಾನೆಗಳು ಆಗಮಿಸಿದ ಬಳಿಕ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪರಿಹಾರ ಹೆಚ್ಚಳಕ್ಕೆ ಮನವಿ: ಈ ವೇಳೆ ಪ್ರತಿಭಟನಾನಿರತ ರೈತರು ಮಾತನಾಡಿ, ಹುಲಿ ದಾಳಿಯಿಂದ ಮೃತಪಟ್ಟ ಹಸುವಿಗೆ ಅರಣ್ಯ ಇಲಾಖೆ ನೀಡುವ 30 ಸಾವಿರ ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಜಾನುವಾರುಗಳಿಗೆ ಮಾಡಿಸಿರುವ ಖಾಸಗಿ ವಿಮೆಯ ಮೊತ್ತ ಪಡೆಯಲು ಅರಣ್ಯ ಇಲಾಖೆಯ ವರದಿ ಅಗತ್ಯವಿದ್ದು, ಹುಲಿ ದಾಳಿಯಿಂದ ಹಸು ಮೃತಪಟ್ಟಿರುವ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಎಚ್.ಪಿ.ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.
ಸ್ಥಳದಲ್ಲಿ ಹುಣಸೂರು ಡಿವೈಎಸ್ಪಿ ರವಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಡಿಎಸ್‌ಎಸ್ ಮುಖಂಡ ಹೊಸಕೋಟೆ ಸೋಮಯ್ಯ, ರೇವಣ್ಣ, ಶ್ರೀನಿವಾಸ್, ಕೂಡ್ಲೂರು ಸಂತೋಷ್, ರಕ್ಷಿತ್, ಅವಿನಾಶ್, ಮನೋಜ್, ರಾಕೇಶ್, ಸುರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಹಾಗೂ ಗ್ರಾಮಸ್ಥರು ಇದ್ದರು.