ಪಾಲಿಕೆ ವಲಯ ಕಚೇರಿ-3ರಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಂ.ಕೆ.ಸವಿತಾ ಇನ್ನಿತರರಿದ್ದರು.
- ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚನೆ
- ಪಾಲಿಕ ವಲಯ ಕಚೇರಿಯಲ್ಲಿ ಸಭೆ
- ಒಂದು ವಾರದಲ್ಲಿ ಶೇ. 50 ಬತ್ತಿದ ಬೋರ್‌ವೆಲ್
ಮೈಸೂರು: ಒಂದು ವಾರದಲ್ಲಿ ಶೇ.50 ಬೋರ್‌ವೆಲ್ ಬತ್ತಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಅರಿತು ಕೆಲಸ ಮಾಡಿದರೆ ಜನರ ಬವಣೆ ತಪ್ಪಿಸಬಹುದು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶಾರದಾದೇವಿನಗರದಲ್ಲಿರುವ ಪಾಲಿಕೆ ವಲಯ ಕಚೇರಿ-3ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹಳ್ಳಿಗಳಲ್ಲೂ ಬೋರ್‌ವೆಲ್‌ಗಳು ಬತ್ತಲು ಶುರುವಾಗಿದೆ. ಕೆಲವು ಕಡೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಗರದ ಹೊರವಲಯದ ಹಳ್ಳಿಗಳಿಗೆ ಕಾವೇರಿ, ಕಬಿನಿ ನದಿಯಿಂದ ಕೊಡುತ್ತಿರುವ ನೀರಿನ ಜತೆಗೆ ಕೊಳವೆಬಾವಿ ಕೊರೆಸಿ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.
ರೀಡ್ರಿಲ್ ಮಾಡಬೇಕು. ಹೊಸದಾಗಿ ಪಾಯಿಂಟ್ ಗುರುತಿಸಿ ಕೊಳವೆಬಾವಿ ಕೊರೆಸಬೇಕು. ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಕ್ರಿಯಾಯೋಜನೆ ಸಲ್ಲಿಸಿ:
ಕೆಲವು ಕಡೆಗಳಲ್ಲಿ 700 ಅಡಿ ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರ್ಷದ್ ಪಾಷಾ ತಿಳಿಸಿದರು. ಇದಕ್ಕೆ ಶಾಸಕರು, ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕರೆದು ಸರಿಯಾದ ಸ್ಥಳ ಗುರುತಿಸಿದ ಮೇಲೆ ಕೊಳವೆಬಾವಿ ಕೊರೆಯಬೇಕು. ಈ ಕುರಿತು ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಿದರೆ ಜಿಲ್ಲಾಧಿಕಾರಿಯಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ತಿಳಿಸಿದರು.
ಗುಂಗ್ರಾಲ್‌ಛತ್ರ, ಸಾಗರಕಟ್ಟೆಯಲ್ಲಿ ನೀರಿನ ಸೆಲೆ ಕಡಿಮೆಯಾಗಿದ್ದರೆ, ಹೊಸಕೋಟೆ, ಯಾಚೇಗೌಡನಹಳ್ಳಿ, ರಾಮನಹಳ್ಳಿಗೆ ಕಾವೇರಿ ನೀರು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದರು. ಆಗ ಶಾಸಕರು, ತಕ್ಷಣವೇ ಪೈಪ್‌ಲೈನ್ ಅಳವಡಿಸಿ ಕಾವೇರಿ ನೀರು ಕೊಡಬೇಕು. ಇಲವಾಲದ ಅಲೋಕದಿಂದ ನೀರು ಕೊಡುವಾಗ ಈ ಗ್ರಾಮಗಳನ್ನು ಸೇರಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಪೈಪ್‌ಲೈನ್, ಮೋಟಾರ್ ಅಳವಡಿಸಿ ವ್ಯವಸ್ಥೆ ಮಾಡಬೇಕು ಎಂದರು
ಚಾ.ಬೆಟ್ಟದ ಸಮಸ್ಯೆ ಗಮನಿಸಿ
ಚಾಮುಂಡಿಬೆಟ್ಟದಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ, ಸ್ವಚ್ಛತೆ ಬಗ್ಗೆ ಗಮನಿಸಬೇಕು. ಸಿಎಂ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಶಾಸಕ ಜಿಟಿಡಿ ಹೇಳಿದರು
ಪಿಡಿಒ ರುಕ್ಮಾಂಗದ ಮಾತನಾಡಿ, ಬೆಟ್ಟಕ್ಕೆ ಮೂರು, ಐದು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಪಾಲಿಕೆಯಿಂದ ಕೊಡುತ್ತಿರುವ 1.50 ಲಕ್ಷ ಲೀಟರ್‌ನಲ್ಲಿ ಭಕ್ತರು, ದಾಸೋಹ, 2500 ನಿವಾಸಿಗಳಿಗೆ ಹಂಚಿಕೆ ಮಾಡಬೇಕಿದೆ. ನಮಗೆ ಕೊಡುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಇಕ್ಬಾಲ್ ಮೊಹಮ್ಮದ್ ಆಸೀಫ್ ಮಾತನಾಡಿ, ಹೊಸದಾಗಿ ಪೈಪ್‌ಲೈನ್ ಕಾಮಗಾರಿಗೆ 8 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಕೆಲಸ ಮುಗಿಸಲಾಗುವುದು. ಮೊದಲು ಟೆಂಡರ್ ಕರೆದಿದ್ದಾಗ ಪೈಪ್‌ಲೈನ್ ಅಳವಡಿಸಲು ಆಕ್ಷೇಪಣೆಯಾಗಿತ್ತು. ಈಗ ಬೇರೆ ಪಾಯಿಂಟ್ ಮೂಲಕ ಕಾಮಗಾರಿ ನಡೆಯಲಿದೆ ಎಂದರು. ಇದನ್ನು ಆಲಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಯಾವುದೇ ಕಾರಣಕ್ಕೂ ಕಾಮಗಾರಿ ನಿಧಾನವಾಗಬಾರದು. ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಸೂಚಿಸಿದರು.
ತಾಪಂ ಇಒ ಕೃಷ್ಣ, ಎಂಡಿಎ ಆಯುಕ್ತ ಬಿ.ಆರ್.ಮಹೇಶ್, ಅಧೀಕ್ಷಕ ಇಂಜಿನಿಯರ್‌ಗಳಾದ ಕೆ.ಜೆ.ಸಿಂಧು, ಕಾರ್ಯಪಾಲಕ ಇಂಜಿನಿಯರ್‌ಗಳಾದ ಶ್ರೀನಿವಾಸ್, ಮೋಹನ್ ಇನ್ನಿತರರಿದ್ದರು.
ಕಸ ಸುರಿಯುವುದಕ್ಕೆ ಕಡಿವಾಣ ಹಾಕಿ
ಚಾಮುಂಡಿಬೆಟ್ಟದ ತಪ್ಪಲಿನ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ತಡೆಯಬೇಕು. ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಸ ಹಾಕದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಕಡಕೊಳ, ರಮ್ಮನಹಳ್ಳಿ, ಪಾಲಿಕೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸುರಿಯಲಾಗುತ್ತಿದ್ದು, ನಾವು ತಡೆಯುತ್ತಿದ್ದೇವೆ ಎಂದರು.
ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಇಂತಹ ಪ್ರದೇಶಗಳನ್ನು ಸ್ವಚ್ಛತೆ ಮಾಡಿ, ನಂತರ ಜಂಟಿಯಾಗಿ ತಡೆಯುವ ಪ್ರಯತ್ನಿಸಲಾಗುವುದು. ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಬಂಡೀಪಾಳ್ಯದಿಂದ ರಸ್ತೆಗೆ ತಂದು ಸುರಿಯದಂತೆ ನೋಡಿಕೊಳ್ಳಲಾಗುವುದು ಎಂದರು.
ಒಪ್ಪಂದದಂತೆ ನೀರು ಕೊಡಿ:
ಹೂಟಗಳ್ಳಿ, ಎಂಡಿಎ, ಖಾಸಗಿ ಬಡಾವಣೆಗಳಿಗೆ ಸಮರ್ಪಕ ನೀರು ಒದಗಿಸಲು ಕಬಿನಿ ನದಿ ಮೂಲದಿಂದ ಕೊಡಲು ಆಗಿರುವ ಒಪ್ಪಂದದಂತೆ ನೀರು ಬಿಡಬೇಕು ಎಂದು ಶಾಸಕ ಜಿಟಿಡಿ ಸೂಚಿಸಿದರು.
ಪೌರಾಯುಕ್ತ ನರಸಿಂಹಮೂರ್ತಿ ಮಾತನಾಡಿ, ಹೂಟಗಳ್ಳಿ ನಗರಸಭೆಗೆ 6 ಎಂಎಲ್‌ಡಿ ನೀರು ಕೊಡುವುದಕ್ಕೆ ಸೂಚನೆ ನೀಡಿದ್ದರೂ ಈಗ 4 ಎಂಎಲ್‌ಡಿ ಕೊಡಲಾಗುತ್ತಿದೆ. ಇದರಿಂದಾಗಿ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಾಣಿವಿಲಾಸ ನೀರು ಸರಬರಾಜು ಮಂಡಳಿ ಎಇಇ ಮೋಹನ್, 4ಎಂಎಲ್‌ಡಿ ಕೊಡುತ್ತಿದ್ದು, 6 ಎಂಎಲ್‌ಡಿ ಕೊಟ್ಟರೆ ನಗರ ಭಾಗಕ್ಕೆ ಸರಿದೂಗಿಸಲು ಸಮಸ್ಯೆಯಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಬಿನಿ ನದಿ ಯೋಜನೆ ರೂಪಿಸುವಾಗ ಬಡಾವಣೆಗಳಿಗೆ ನೀರು ಕೊಡುತ್ತೇವೆಂದು ಒಪ್ಪಂದವಾಗಿದೆ. ಅದಕ್ಕೆ ತಕ್ಕಂತೆ ಪಾಲು ಕೊಡಲಾಗಿದೆ. ಮೈಸೂರು ನಗರಕ್ಕೆ 300 ಎಂಎಲ್‌ಡಿ ನೀರು ಹರಿಸಿದಾಗ, ಹೂಟಗಳ್ಳಿಗೆ 6 ಎಂಎಲ್‌ಡಿ ನೀರು ಕೊಡಲು ಸಮಸ್ಯೆ ಏನು? 3 ಸಭೆಗಳಿಂದ ಹೇಳುತ್ತಲೇ ಬಂದಿದ್ದರೂ ಏಕೆ ಈ ರೀತಿ ಮಾಡಲಾಗುತ್ತಿದೆ. ಮತ್ತೆ ಇಂತಹ ದೂರು ಬರಬಾರದು ಎಂದು ಸೂಚಿಸಿದರು.
ಕರೆಂಟ್ ಇಲ್ಲದಿದ್ದರೆ ಜನರ ಗತಿ ಏನು
ಒಂದು ವಾರದಿಂದ ಬೆಳಗ್ಗೆಯಿಂದ ರಾತ್ರಿ ತನಕ ವಿದ್ಯುತ್ ಕೊಡದೆ ಸಮಸ್ಯೆಯಾಗಿದೆ. ರಾತ್ರಿ ವೇಳೆ ಕರೆಂಟ್ ಇಲ್ಲದಿದ್ದರೆ ಜನರ ಗತಿ ಏನು? ಎಂದು ಶಾಸಕರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಎಇಇ ಮಾತನಾಡಿ, ರಾಯಚೂರು ವಿದ್ಯುತ್ ಸ್ಥಾವರ ಘಟಕದಲ್ಲಿ ಸಮಸ್ಯೆಯಾಗಿರುವ ಕಾರಣ ಇಡೀ ರಾಜ್ಯಾದ್ಯಂತ ಸಮಸ್ಯೆಯಾಗಿದೆ. 4 ದಿನಗಳ ಕಾಲ ಸಮಸ್ಯೆಯಾಗಿದಲ್ಲದೆ, 220 ಕೆವಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸರಿಯಾಗಿದೆ ಎಂದು ಉತ್ತರಿಸಿದರು.