ತಿ.ನರಸೀಪುರ ಪಟ್ಟಣದ ಸೆಂಟ್ ಮೇರಿಸ್ ಶಾಲೆಯಲ್ಲಿ ಜನಗಣತಿಯ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಟಿ.ಜಿ. ಸುರೇಶಾಚಾರ್, ಎಸ್.ಸಿ.ಶಿವಮೂರ್ತಿ, ಗೋವಿಂದರಾಜು, ಮೂಗೂರು ಕುಮಾರಸ್ವಾಮಿ ಇತರರು ಇದ್ದರು.
ತಿ.ನರಸೀಪುರ : ಜನಗಣತಿ ವೇಳೆ ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ನಿಖರ ಮಾಹಿತಿಗಳನ್ನು ಪಡೆಯಬೇಕು ಎಂದು ಗಣತಿಯ ಉಸ್ತುವಾರಿ ಅಧಿಕಾರಿಯೂ ಆದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಹೇಳಿದರು.
ಪಟ್ಟಣದ ಸೆಂಟ್ ಮೇರಿಸ್ ಶಾಲೆಯಲ್ಲಿ ಶುಕ್ರವಾರ 2027 ರ ಭಾರತ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸೂಕ್ತ ಮಾಹಿತಿ ನೀಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ತರಬೇತಿಯನ್ನು ತಪ್ಪದೆ 3 ದಿವಸಗಳ ಕಾಲ ಪಡೆಯಲೇಬೇಕು. ಗಣತಿದಾರರಿಗೆ ಕಾಲಕಾಲಕ್ಕೆ ನಿಖರ ಮಾಹಿತಿಗಳನ್ನ ನೀಡಲಾಗುವುದು. ಮನೆಗಳಿಗೆ ನಂಬರ್ ಕೊಡದಿದ್ದರೆ ತಾವೇ ನಂಬರ್ ಕೊಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಮಾತನಾಡಿ, ತರಬೇತಿ ಎಂಬುದು ಪ್ರತಿಯೊಬ್ಬ ಮನುಷ್ಯನ ಪ್ರಬುದ್ಧತೆಗೆ ಕನ್ನಡಿ ಹಿಡಿಯುತ್ತದೆ. ಸರಿಯಾದ ತರಬೇತಿ ದೊರಕದಿದ್ದಾಗ ಅಥವಾ ಸರಿಯಾಗಿ ಅರ್ಥ್ಯೆಸಿಕೊಳ್ಳದಿದ್ದಾಗ ನಾವು ಪರಿಪೂರ್ಣತೆ ಸಾಧಿಸಲಾಗದು. ಆದ್ದರಿಂದ ಒಂದೊಂದು ತಂಡಕ್ಕೂ 3 ದಿನಗಳಂತೆ 9 ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಾಗಾರದಲ್ಲಿ ತಪ್ಪದೆ ಭಾಗವಹಿಸಿ ಮನೆಗಣತಿ ಹಾಗೂ ಜನಗಣತಿ ಕಾರ್ಯದ ಆಧಾರ ಸ್ಥಂಭಗಳಾಗಬೇಕು. ಜನಸಂಖ್ಯೆ ಆಧಾರದ ಮೇಲೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ಕೀರ್ತಿ ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು
ಸಿಡಿಪಿಒ ಗೋವಿಂದರಾಜು, ಸಿಆರ್‌ಪಿ ನಾಗೇಶ್, ಉಪ ತಹಸೀಲ್ದಾರ್ ಮಹದೇವಸ್ವಾಮಿ, ಸಹಾಯಕ ಚಾರ್ಜ್ ಆಫೀಸರ್‌ಗಳಾದ ಕುಮಾರ್, ಸುರೇಶ್, ನಿತಿನ್, ಮಾಸ್ಟರ್ ಟ್ರೇ ನರ್ಸ್ (ಫೀಲ್ಡ್ ಟ್ರೇನರ್ಸ್) ಗಳಾದ ಉಪನ್ಯಾಸಕರಾದ ಎನ್.ಜವರಯ್ಯ, ಕುಮಾರಸ್ವಾಮಿ, ಸುನೀಲ್ ಜಸ್ಟೀನ್, ಮುರಳೀಧರ್, ಚಲುವರಾಜು, ಚಂದ್ರು, ದೇವಣ್ಣ ಹಾಗೂ ಇನ್ನಿತರರು ಇದ್ದರು.